ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ತೀರ್ಥರಾಜ್ ಸಂಗಮದ ದಡದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಹಲವರು ಪ್ರಾಣ ಕಳೆದುಕೊಂಡು, ಹಲವರು ಗಾಯಗೊಂಡಿರುವುದು ಆಘಾತಕಾರಿ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಮೃತರ ಕುಟುಂಬಕ್ಕೆ ನಮ್ಮ ಸಂತಾಪಗಳು, ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಕಾಂಗ್ರೆಸ್ ತಿಳಿಸಿದೆ.
ಸಾವಿರಾರು ಕೋಟಿ ವೆಚ್ಚದಲ್ಲಿ ಕುಂಭಮೇಳ ನಡೆಯುತ್ತಿದ್ದರೂ ಭಕ್ತಾದಿಗಳ ಕುಂಭ ಸ್ನಾನ, ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡದಿರುವುದು, ಕೇಂದ್ರ – ರಾಜ್ಯ ಸರ್ಕಾರಗಳು ಕುಂಭ ಮೇಳದ ಹೆಸರಿನಲ್ಲಿ ಪ್ರಚಾರಕ್ಕಷ್ಟೇ ಪ್ರಾಧಾನ್ಯತೆ ನೀಡುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಕುಂಭಮೇಳ, ಕುಂಭ ಸ್ನಾನ ಇನ್ನೂ ಹಲವು ದಿನಗಳು ನಡೆಯಲಿದ್ದು ಉತ್ತರ ಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಯಾತ್ರಾರ್ಥಿಗಳಿಗೆ ಸೂಕ್ತ ವ್ಯವಸ್ಥೆಮಾಡಬೇಕು ಎಂದು ಕಾಂಗ್ರೆಸ್ ಆಗ್ರಹ ಮಾಡಿದೆ.

