ಕುಂಚಿಟಿಗ ವಕ್ಕಲಿಗರು ಒಗ್ಗಟ್ಟು ಪ್ರದರ್ಶಿಸಿ ದೊಡ್ಡ ಶಕ್ತಿಯಾಗಿ ಬೆಳೆಯಬೇಕು- ಒಕ್ಕಲಿಗ ಸಂಘದ ನಿರ್ದೇಶಕ ಜೆ.ರಾಜು

News Desk

ಚಂದ್ರವಳ್ಳಿ ನ್ಯೂಸ್, ಅಮರಾಪುರ:
ಕರ್ನಾಟಕ ಗಡಿ ಭಾಗದ ಅಮರಾಪುರಂ ಮಂಡಲ ಸೇರಿದಂತೆ ಮಡಕಶಿರಾ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕುಂಚಿಟಿಗ ಒಕ್ಕಲಿಗ ಸಮುದಾಯ ಇದ್ದು ಒಗ್ಗಟ್ಟಿನಿಂದ ಕೂಡಿ ಬಾಳುವ ಮೂಲಕ ದೊಡ್ಡ ಶಕ್ತಿಯಾಗಿ ಬೆಳೆಯಬೇಕು ಎಂದು ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರು
, ಬಿಬಿಎಂಪಿ ಉಪ ಆಯುಕ್ತರಾದ ಬೇತೂರು ಜೆ.ರಾಜು ಕರೆ ನೀಡಿದರು.

ಅಮರಾಪುರ ಮಂಡಲ ಕೇಂದ್ರದ ಅಮರಾಪುರದಲ್ಲಿ ಕುಂಚಿಟಗ ವಕ್ಕಲಿಗ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಮೂರ್ತಿ ಪ್ರತಿಷ್ಠಾಪನಾ ಕಾರ್ಯದ ಭೂಮಿ ಪೂಜೆಗೆ ಅವರು ಚಾಲನೆ ನೀಡಿ ಮಾತನಾಡಿದರು. ನಮ್ಮಿರುವ ಒಡಕಿನಿಂದಾಗಿ ಕುಂಚಿಟಿಗ ಒಕ್ಕಲಿಗ ಸಮಾಜಕ್ಕೆ ಹಲವು ಕ್ಷೇತ್ರಗಳಲ್ಲಿ ಅನ್ಯಾಯವಾಗಿದೆ.

ಹಾಗಾಗಿ ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ತೊರೆಯಬೇಕು. ಸಮಾಜ ಎಂದು ಬಂದಾಗ ಪಕ್ಷಾತೀತವಾಗಿ ಒಗ್ಗೂಡಬೇಕು. ಸಮಾಜಕ್ಕೆ ಒಂದು ಶಕ್ತಿಯಾಗಿ ನಿಲ್ಲಬೇಕು ಎಂದು ಜೆ.ರಾಜು ಕರೆ ನೀಡಿದರು.
ಅಮರಾಪುರಂ ಮಂಡಲವು ಹೋಬಳಿ ಕೇಂದ್ರವಾಗಿದ್ದು ಈ ಅಮರಾಪುರದಲ್ಲಿ ನಾಡ ಪ್ರಭು ಕೆಂಪೇಗೌಡ ಮೂರ್ತಿ ಸ್ಥಾಪನೆ ಮಾಡುವುದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

 ಮಡಕಶಿರಾ ತಾಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆ ಅಮರಾಪುರ ಮಂಡಲದಲ್ಲಿದೆ. ಇಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡುತ್ತಿರುವ ಯುವಕರಿಗೆ ಒಂದು ಲಕ್ಷ ರೂ.ಗಳನ್ನು ದೇಣಿಗೆ ನೀಡುತ್ತೇನೆ. ಈ ಹಣ ಬಳಸಿಕೊಂಡು ಉತ್ತಮ ಗುಣಮಟ್ಟದ ಪ್ರತಿಮೆ ಅನಾವರಣ ಮಾಡಬೇಕು ಎಂದು ಅವರು ಹೇಳಿದರು.

ಆಂದ್ರ ರಾಜ್ಯದ ಕುಂಚಿಟಿಗ ವಕ್ಕಲಿಗ ಸಂಸ್ಥೆಯ ಮಾಜಿ ಅಧ್ಯಕ್ಷೆ ಡಾ.ಬಿ.ನಳಿನಿ ಮಾತನಾಡಿ ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ 25 ಸಾವಿರ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಕುಂಚಿಟಿಗ ಒಕ್ಕಲಿಗ ಸಮಾಜದ ಮಕ್ಕಳು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಓದಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಒಂದರಿಂದಲೇ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ಆಂದ್ರ ರಾಜ್ಯದ ಕುಂಚಿಟಿಗ ವಕ್ಕಲಿಗ ಸಬಲೀಕರಣ ಸಮಿತಿಯ ಕನ್ವೀನರ್ ವಿ.ಎಂ ಪಾಂಡುರಂಗಪ್ಪ ಮಾತನಾಡಿ ಸಮಾಜ ಸಂಘಟನೆಗೆ ಕೈಲಾದ ಸಹಾಯ ಮಾಡುತ್ತೇನೆ. ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ 25 ಸಾವಿರ ರೂ.ಗಳನ್ನು ನೀಡುವುದಾಗಿ ಹೇಳಿದರು.

ಗುಡಿ ಬಂಡೆ ಮಂಡಲ ವ್ಯಾಪ್ತಿಯ ಕುಂಬಾರ ನಾಗೇಪಲ್ಲಿ ಗ್ರಾಮದ ಕೆಎನ್ ಪಲ್ಲಿ ಸುರೇಶ್ ಮಾತನಾಡಿ ಸಮಾಜದ ಯುವಕರು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡುವ ಮೂಲಕ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರಲ್ಲದೆ ಪ್ರತಿಮೆ ಸ್ಥಾಪನೆಗೆ 50 ಸಾವಿರ ರೂ.ನೀಡುವುದಾಗಿ ಅವರು ಪ್ರಕಟಿಸಿದರು.

ಕುಂಚಿಟಿಗ ವಕ್ಕಲಿಗ ಸೇವಾಸಮಿತಿ, ಕೆಂಪೇಗೌಡ ಯುವಕ ಸಂಘ, ಮಹಿಳಾ ಸಂಘ, ಕುಂಚಿಟಿಗ ವಕ್ಕಲಿಗ ಸಹೋದರರು ಗಣ್ಯ ವ್ಯಕ್ತಿಗಳಿಗೆ ಇದೇ ಸಂದರ್ಭದಲ್ಲಿ ವಿಶೇಷ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಮಡಕಶಿರಾ ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಎನ್‌.ಆರ್‌.ಹನುಮಂತರಾಯಪ್ಪ, ಮಾಜಿ ಗೌರವಾಧ್ಯಕ್ಷ ಹಲುಕೂರು ಕಾಂತರಾಜು, ಜಿಲ್ಲಾ ಕುಂಚಿಟಿಗ ವಕ್ಕಲಿಗ ಸಂಘದ ಅಧ್ಯಕ್ಷ ಬಿಎಲ್‌ಆರ್‌ಬ್ರಿಕ್ಸ್‌ಮಾಲೀಕ ವೀರಕ್ಯಾತರಾಯ, ಮಾಜಿ ಗ್ರಾಪಂ ಸದಸ್ಯ ವಿಶ್ವೇಶ್ವರಯ್ಯ, ಮಾಜಿ ಸಂಸದ ಕೃಷ್ಣಮೂರ್ತಿ, ಶ್ರೀಮತಿ ನಳಿನಾಕ್ಷಿ ರಾಮಿರೆಡ್ಡಿ, ಅಮರಾಪುರ, ಗುಡಿ ಬಂಡೆ ಮಂಡಲಗಳಿಗೆ ಸೇರಿದ ಕುಂಚಿಟಿಗ ವಕ್ಕಲಿಗ ಸಹೋದರ ಸೋದರಿಯರು, ಯುವಕರು, ಕುಂಚಿಟಿಗ ವಕ್ಕಲಿಗ ಸಂಘದ ನಾಯಕರು, ಸ್ಥಳೀಯ ಕುಂಚಿಟಗ ವಕ್ಕಲಿಗ ಸಮಿತಿ, ಕೆಂಪೇಗೌಡ ಯುವ ಸಂಘದ ಮುಖಂಡರು ಭಾರೀ ಪ್ರಮಾಣದಲ್ಲಿ ಸೇರಿದ್ದರು.

- Advertisement -  - Advertisement - 
Share This Article
error: Content is protected !!
";