ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಂಚಿಟಿಗರು ಕರ್ನಾಟಕ ರಾಜ್ಯದ 18 ಜಿಲ್ಲೆ 46 ತಾಲೂಕುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದರೂ ಕೂಡ ಒಕ್ಕಲಿಗ ಮತ್ತು ಲಿಂಗಾಯಿತ ಜಾತಿಗಳ ನಡುವೆ ಸಿಲುಕಿ ರಾಜ್ಯ ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟ ದ ಅಧ್ಯಕ್ಷ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ನಡೆದ ಕುಂಚಿಟಿಗರ ಪ್ರತಿಭಾ ಪುರಸ್ಕಾರ ಮತ್ತು ಶ್ರೀ ಬನುಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವ್ಯವಹಾರಗಳ ಸಂಬಂಧಿತ ವೃತ್ತಿಗಳನ್ನು ಮಾಡಬೇಕೆಂದು ತಿಳಿಸಿದರು.
ವಿಶ್ರಾಂತ ಐಎಎಸ್ ಅಧಿಕಾರಿ ಹಾಗೂ ಮಾಹಿತಿ ಹಕ್ಕು ಆಯುಕ್ತೆ ಡಾ.ಮಮತಾ ಮಾತನಾಡಿ ಮಕ್ಕಳು ಬರುವ ದಿನಗಳಲ್ಲಿ ಕೇವಲ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೆಲಸಗಳಿಗೆ ಹೋಗುವ ಬದಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ವೃತ್ತಿಯ ಜೊತೆ ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು. ಕೆಎಎಸ್ ಅಧಿಕಾರಿ ಸುಷ್ಮಾ ಜೆ ಪ್ರಕಾಶ್ ಮಾತನಾಡಿ ಹೆಚ್ಚಿನ ಶ್ರಮ ಹಾಕಿದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲಬಹುದು. ಗೆದ್ದು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬಹುದು ಎಂದು ಅಭಿಪ್ರಾಯಗಳನ್ನು ಹಂಚಿಕೊಂಡರು.
ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಬೇತೂರು ಪಾಳ್ಯ ಜೆ.ರಾಜು ಮಾತನಾಡಿ ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ಮಕ್ಕಳಲ್ಲಿ ಬರಬೇಕು. ವಿದ್ಯಾಭ್ಯಾಸದ ನಂತರ ಉತ್ತಮ ವೃತ್ತಿ ವ್ಯವಹಾರಗಳಲ್ಲಿ ತೊಡಗಿಕೊಂಡು ಸಮಾಜವನ್ನು ಕೈಬಿಡಬಾರದು ಎಂದು ತಿಳಿಸಿದರು.
ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ ಮಾತನಾಡಿ ಕುಂಚಿಟಿಗರ ಕುಲತಿಲಕ, ಧರ್ಮ ಪ್ರಕಾಶ ರಾವ್ ಬಹದ್ದೂರ್ ಡಿ.ಬನುಮಯ್ಯನವರ ಆದರ್ಶಗಳನ್ನು ಯುವಕರು ಪಾಲಿಸಬೇಕು. 1928 ರಲ್ಲಿ ಮೈಸೂರು ಮಹಾರಾಜರಿಗೆ ಮನವಿ ಮಾಡಿ ಕುಂಚಿಟಿಗ ಜಾತಿ ಹಿಂದೂ ಧರ್ಮದಲ್ಲಿ ಒಂದು ಸ್ವತಂತ್ರ ಜಾತಿ ಎಂದು ಆದೇಶ ಮಾಡಿಸಿದ ಬನುಮಯ್ಯನವರು ಆಧುನಿಕ ಕುಂಚಿಟಿಗ ಪಿತಾಮಹ ಎಂದು ಬಣ್ಣಿಸಿದರು.
ಕುಂಚಿಟಿಗ ಜಾತಿ ಯಾವುದೇ ಜಾತಿಯ ಉಪಜಾತಿಯಲ್ಲ. ಆದ್ದರಿಂದ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಸುವ ಜಾತಿ ಗಣತಿಯಲ್ಲಿ ಕಡ್ಡಾಯವಾಗಿ ಕುಂಚಿಟಿಗ ಎಂದು ಬರೆಯಿಸಿ ಎಂದು ತಿಳಿಸಿದರು.
ಎಸ್.ವಿ ರಂಗನಾಥ್ ಮಾತನಾಡಿ ಕುಂಚಿಟಿಗ ಪ್ರತಿಭಾವಂತ ಮಕ್ಕಳು ಏಕಾಗ್ರತೆಯಿಂದ ಕಠಿಣ ಪರಿಶ್ರಮ ಹಾಕಿ ನಿರಂತರ ಅಧ್ಯಯನ ಮಾಡಿ ಉನ್ನತ ಶಿಕ್ಷಣ ಪಡೆದು ಹೆತ್ತ ತಂದೆ ತಾಯಿಯರಿಗೆ ಕೀರ್ತಿ ತರಬೇಕು ಎಂದು ಹೇಳಿದರು. ರಾಜ್ಯ ಕುಂಚಿಟಿಗ ಸಂಘದ ಉಪಾಧ್ಯಕ್ಷ ಜೋಗೇಶ್, ಖಜಾಂಚಿ ಪೆಪ್ಸಿ ಹನುಮಂತ್ರಾಯ, ಕೆ.ಜಿ. ಹನುಮಂತರಾಯ, ಕಾರ್ಯದರ್ಶಿ ಕುಬೇರಪ್ಪ, ಸಂಸ್ಥಾಪಕ ಅಧ್ಯಕ್ಷ ಅಶೋಕ್,
ಗೌರವಾಧ್ಯಕ್ಷ ಗಡಾರಿ ಕೃಷ್ಣಪ್ಪ, ವಕೀಲ ಲಕ್ಷ್ಮಣ್ ಗೌಡ್ರು, ಬಾಬು ಕಾಮ್ಟೆ, ಮಂಜುನಾಥ್, ಚಂದ್ರಗಿರಿ, ಜಯಪ್ರಕಾಶ್, ಕುಮಾರಸ್ವಾಮಿ, ಚೇತನ್, ಶಶಿಕಲಾ, ವಾಣಿ ಮಹಾಲಿಂಗಪ್ಪ, ರಮ್ಯ ರಾಜು ಗೌಡ, ಭಾರತಿ. ಯು ವಿ ಗೌಡ, ಶ್ರೀನಾಥ್, ಅವಿನಾಶ, ಚಂದ್ರಶೇಖರ್, ರಾಜೇಶ್ ಆಪ್ಟಿಕಲ್ಸ್, ಕುರುಬರಹಳ್ಳಿ ದೇವರಾಜ್, ರಾಮಸ್ವಾಮಿ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಆಗಮಿಸಿ ಸನ್ಮಾನ ಸ್ವೀಕರಿಸಿದರು.