ಮಾರ್ಚ್.8 ರಂದು ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಪ್ರದಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣೆ ಸಮಾರಂಭವನ್ನು ಮಾರ್ಚ್ 8 ರಂದು ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ತಿಳಿಸಿದರು.

ಇಲ್ಲಿನ ಪತ್ರಕರ್ತರ ಸಂಘದಲ್ಲಿ ಅವರು ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023 ಹಾಗೂ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಒಟ್ಟು 10 ಮಂದಿ ಭಾಷಾ ಅನುವಾದಕರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಯಲ್ಲಿ 2022 ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನ ವಿತರಣೆಗೆ ಒಟ್ಟು 10 ಅನುವಾದಗೊಂಡ 10 ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಅಂದು ಪುಸ್ತಕ ಬಹುಮಾನ ವಿತರಣೆ ಹಾಗೂ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಗೌರವ ಪ್ರಶಸ್ತಿಗಳನ್ನು ಪಡೆದ ಸಾಧಕರಿಗೆ 50 ಸಾವಿರ ರೂ., ಆಕರ್ಷಕ ಫಲಕಗಳನ್ನು ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ ಪುಸಕ್ತ ಬಹುಮಾನಕ್ಕೆ ಆಯ್ಕೆಯಾಗಿರುವ ಲೇಖಕರಿಗೆ ತಲಾ 25 ಸಾವಿರ ರೂ. ಹಾಗೂ ಆಕರ್ಷಕ ಫಲಕ ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಸಂಚಾಲಕ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ರಾಜ್ಯ ಮಟ್ಟದ ಕಾರ್ಯಕ್ರಮ ಬೆಂಗಳೂರಿನಿಂದ ಹೊರಗಡೆ ಅದರಲ್ಲೂ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ೨೦೨೩ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಎಚ್.ಎಸ್.ರಾಘವೇಂದ್ರರಾವ್, ವಿನಯಚೈತನ್ಯ, ಡಾ. ಎಚ್.ಎಂ.ಕುಮಾರಸ್ವಾಮಿ, ಡಾ.ನಟರಾಜ್ ಹುಳಿಯಾರ್, ಡಾ.ದು.ಸರಸ್ವತಿ ಮತ್ತು ೨೦೨೪ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರಾದ ಡಾ.ಆರ್.ಕೆ.ಕುಲಕರ್ಣಿ, ಡಾ.ಕರೀಗೌಡ ಬೀಚನಹಳ್ಳಿ, ಡಾ.ರಾಜೇಂದ್ರಚೆನ್ನಿ, ಬೋಡೆ ರಿಯಾಜ್‌ ಅಹ್ಮದ್, ಬಸು ಬೇವಿನಗಿಡದ ಇವರುಗಳನ್ನು ಆಗಮಿಸಲಿದ್ದಾರೆ.

ಇವರುಗಳ ಜೊತೆಯಲ್ಲಿ ೨೦೨೨ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಾದ (ಅನುವಾದಕರು) ಮೈತ್ರೇಯಿ ಕೆ.ಆರ್, ಜಯಶ್ರೀ ಭಟ್,  ಬಿ.ಆರ್.ಜಯರಾಮರಾಜೇಅರಸ್, ಡಾ.ವಿಕ್ರಮ ವಿಸಾಜಿ, ಶುಭಮಂಗಳ ಎಂ.ಜಿ ಹಾಗೂ ೨೦೨೩ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಾದ (ಅನುವಾದಕರು) ಸುಕನ್ಯಾ ಕನಾರಳ್ಳಿ, ಶ್ರೀಧರ ಹೆಗ್ಗೋಡು, ವಿಕಾಸ್‌ ಆರ್.ಮೌರ್ಯ, ಬ್ರಿ. ಸುಬ್ಬಯ್ಯ ಜಿ.ಭಾಗ್ವತ್, ತೋಂಟದ ಸಿದ್ದರಾಮ  ಸ್ವಾಮಿಗಳು ಪ್ರಶಸ್ತಿ ಸ್ವೀಕರಿಸಲು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮವನ್ನು ಮಾರ್ಚ್.8ರಂದು ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ವಿತರಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ವಿತರಣೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ್ ತಂಗಡಗಿ ಮಾಡಲಿದ್ದಾರೆ.

ಸಾಹಿತಿ ಡಾ. ಕೆ. ಮರುಳ ಸಿದ್ದಪ್ಪ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡುವರು. ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅಧ್ಯಕ್ಷತೆ ವಹಿಸುವರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆಂದು ಅವರು ತಿಳಿಸಿದರು.

 

ಆಹ್ವಾನಿತರಾಗಿ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್‌ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್‌ಎಸ್.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಎಂ. ರೇಣುಕ, ಪೌರಾಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ ಗುರುನಾಥ್, ಈಶ್ವರ್ ಕು.ಮಿರ್ಜಿ ಪಾಲ್ಗೊಳ್ಳಲಿದ್ದಾರೆ.
ಡಾ.ಬಿ.ಎಂ ಗುರುನಾಥ್, ಈಶ್ವರ್ ಕು.ಮಿರ್ಜಿ ಸುದ್ದಿಗೋಷ್ಠಿಯಲ್ಲಿ ಇದ್ದರು.

 

Share This Article
error: Content is protected !!
";