ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ನಂಜಯ್ಯನ ಕೊಟ್ಟಿಗೆ ಸ್ಮಶಾನದಲ್ಲಿ ನಡುರಾತ್ರಿ ಕುವೆಂಪು ದಿನಾಚರಣೆ ಹಾಗೂ ಸ್ಮಶಾನ ಕವಿ ಗೋಷ್ಠಿ ನಡೆಸಲಾಯಿತು.
ಕುವೆಂಪು ಗೆಳೆಯರ ಬಳಗ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ ಇವರ ಆಯೋಜಕತ್ವದಲ್ಲಿ ಕುವೆಂಪು ದಿನಾಚರಣೆಯನ್ನು ಸ್ಮಶಾನದಲ್ಲಿ ಕವಿಗೋಷ್ಠಿ ಆಯೋಜನೆ ಮಾಡುವ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ವಕೀಲ ಪಿ.ಆರ್ ದಾಸ್ ಅವರು ಕುವೆಂಪು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಸ್ಮಶಾನವೆಂದರೆ ಭೂತ ಪ್ರೇತಗಳ ಭಯಾನಕ ಸ್ಥಳ, ಹಗಲು ವೇಳೆಯಲ್ಲಿ ಇಲ್ಲಿ ತಿರುಗಾಡಲು ಹೆದರುವ ಮನಃಸ್ಥಿತಿ ಇರುವಾಗ ಇಂತಹ ವಿಭಿನ್ನ ವಿನೂತನ ಕಾರ್ಯಕ್ರಮವನ್ನು ನಡುರಾತ್ರಿ ಸ್ಮಶಾನದಲ್ಲಿ ಮಾಡುವುದು ಅಚ್ಚರಿ ವಿಷಯವಾಗಿದೆ ಎಂದರು.
ಈ ಮೂಲಕ ಕುವೆಂಪುರವರ ತತ್ವ ವಿಚಾರಗಳನ್ನು ಜೀವಂತವಾಗಿಡುವ ಪ್ರಯತ್ನಗಳಲ್ಲಿ ಇದು ಉತ್ತಮವಾದದ್ದು ಎಂದು ಅಭಿಪ್ರಾಯ ಪಟ್ಟರು. ವಿಶ್ವಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ ರವೀಶ ಅಕ್ಕರ ಮಾತನಾಡಿ ನಮ್ಮ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ರಾಜ್ಯಾದ್ಯಂತ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.
ಮೊದಲ ಕಾರ್ಯಕ್ರಮವನ್ನು ಕುವೆಂಪುರವರ ಜನ್ಮಸ್ಥಳ ಕವಿಶೈಲದಲ್ಲಿ ಮಾಡುವ ಮೂಲಕ ಕನ್ನಡ ನಾಡು ನುಡಿಯ ಸೇವೆಯನ್ನು ಆರಂಭಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಸಹಸ್ರ ಕವಿಗಳ ಗೋಷ್ಠಿ ಆಯೋಜಿಸಿದ್ದನ್ನು ಸ್ಮರಿಸುತ್ತಾ, ಕುವೆಂಪು ದಿನಾಚರಣೆಯಂತಹ ಕಾರ್ಯಕ್ರಮವನ್ನು ನಡುರಾತ್ರಿ ಸ್ಮಶಾನದಲ್ಲಿ ಮಾಡುವುದು ನನ್ನ ವಿಭಿನ್ನ ಆಲೋಚನೆಗಳಲ್ಲಿ ಒಂದಾದದ್ದು. ಈ ಆಲೋಚನೆ ಸಾಕಾರಗೊಳಿಸಲು ಹಿರಿಯೂರಿನಲ್ಲಿ ಈ ಕಾರ್ಯಕ್ರಮ ನಮ್ಮೆಲ್ಲ ಗೆಳೆಯರ ಸಹಕಾರದೊಂದಿಗೆ ಯಶಸ್ವಿಯಾಗುತ್ತಿರುವುದು ಸಂತಸದ ಸಂಗತಿ ಎಂದರು.
ಕುವೆಂಪು ಗೆಳೆಯರ ಬಳಗದ ಅಧ್ಯಕ್ಷ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಗೌರವಧ್ಯಕ್ಷ ಡಾ. ಎಸ್ ಎಚ್ ಶಫೀಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸ್ಮಶಾನದಲ್ಲಿ ಕುವೆಂಪು ದಿನಾಚರಣೆ ಹಾಗೂ ಕವಿಗೋಷ್ಠಿ ಏರ್ಪಡಿಸುವ ಮೂಲಕ ಸಮಾಜದ ಜನರ ಸ್ಮಶಾನ ಭಯವನ್ನು ಹೋಗಲಾಡಿಸುವದರೊಂದಿಗೆ ಕುವೆಂಪು ವಿಚಾರಗಳ ಹಿನ್ನೆಲೆಯಲ್ಲಿ ಸಮಾಜದ ಕಂದಾಚಾರಗಳನ್ನು ಹೋಗಲಾಡಿಸಲು ಅಗತ್ಯವಾದ ಅರ್ಥಗರ್ಭಿತ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆಯೋಜನೆಯ ವಿರುದ್ಧವಾಗಿ ಕೆಲವು ಕುಹಕಿಗಳ ನಿಂದನಾತ್ಮಕ ನುಡಿಗಳನ್ನು ಆಡಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾರ್ಯಕ್ರಮ ಯಶಸ್ವಿಗೊಳಿಸಿದ್ದೇವೆ. ಇದಕ್ಕೆ ಚಿತ್ರದುರ್ಗ, ತುಮಕೂರು, ಮೈಸೂರು, ಕೊಪ್ಪಳ ಜಿಲ್ಲೆಗಳಿಂದ, ಬೇರೆ ಬೇರೆ ತಾಲೂಕುಗಳಿಂದ ಹಾಗೂ ಹಿರಿಯೂರು ಮತ್ತು ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ ಕವಿ ಹಾಗೂ ಕವಯತ್ರಿಯರ ಸಹಕಾರ ಭಾಗವಹಿಸುವಿಕೆ ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.
ಅಲ್ಲದೆ ಈ ಕಾರ್ಯಕ್ರಮಕ್ಕೆ ಮಹಿಳೆಯರು ಸಹ ಯಾವುದೇ ಸಂಕೋಚ ಭಯವಿಲ್ಲದೆ ನಿರ್ಭೀತಿಯಿಂದ ಆಗಮಿಸಿದ್ದು ವಿಶೇಷವಾಗಿದೆ ಎಂದರು. ಉಪನ್ಯಾಸಕ ಅನಿಲ್ ಕುಮಾರ್, ಆಕಾಶವಾಣಿ ಸಂದರ್ಶಕ ನಿರೂಪಕ ನವೀನ್ ಮಸ್ಕಲ್, ಹಾಸ್ಯ ಸಾಹಿತಿ ಜಗನ್ನಾಥ್ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಬೆಳಕುಪ್ರಿಯ, ನಿಶಾ ಮುಳಗುಂದ ಮೈಸೂರು, ಲೀಲಾ ಗುರುರಾಜ್ ತುಮಕೂರು, ಶಿವಮೂರ್ತಿ.ಟಿ ಕೋಡಿಹಳ್ಳಿ, ವೇಣುಕುಮಾರ್ ಭರಂಪಪುರ, ಪ್ರವೀಣ್ ಕುಮಾರ್, ಬ್ಯಾಡರಹಳ್ಳಿ, ಶಿವಾನಂದ ಬಂಡೆಹಳ್ಳಿ, ಮುದ್ದುರಾಜ್ ಹುಲಿ ತೊಟ್ಟಿಲು, ಹಂಸದಾಸ ಚಳ್ಳಕೆರೆ,ರಂಗಧಾಮ ಸಮುದ್ರದಳ್ಳಿ, ಭರತ್ ಎಚ್. ಜಿ. ಬಿ, ಪ್ರವೀಣ್ ಕೆ ಎನ್ ಮೈಸೂರು, ಶಾರದಾ ಜೈ ರಾಮ್ ಚಿತ್ರದುರ್ಗ, ಸುರೇಂದ್ರ ಸ್ವಾಮಿ ಕೊಪ್ಪಳ, ಕಿರಣ್ ಎಸ್ ಮೈಸೂರು, ಶಶಿಧರ ಕೋಡಿಹಳ್ಳಿ, ತೇಜಸ್ ಆದಿವಾಲ, ಹೆಚ್. ಕೆ ಗಿರಿಜಾ ಹಿರಿಯೂರು, ರಾಜಣ್ಣ ಗೋಪನಳ್ಳಿ, ಕೆಂಚಮ್ಮ ಕವನ ವಾಚನ ಮಾಡಿದರು.
ಶಾರದಾ ಜೈರಾಮ್ ಹಾಗೂ ಗಿರಿಜಾ ಪ್ರಾರ್ಥಿಸಿದರು. ರಂಗಧಾಮ ಸಮುದ್ರದಳ್ಳಿ ಸ್ವಾಗತಿಸಿದರು. ವೇಣು ಕುಮಾರ್ ಭರಂಫುರ ನಿರೂಪಿಸಿದರು. ಶಿವಮೂರ್ತಿ.ಟಿ ಕೋಡಿಹಳ್ಳಿ ವಂದಿಸಿದರು.

