ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಟಿಂಬರ್ ನಲ್ಲಿ ಕಾರ್ಮಿಕ ಕೆಲಸ ಮಾಡುತ್ತಿದ್ದ ಓರ್ವನಿಗೆ ಮಗಳೊಂದಿಗೆ ಸಲುಗೆಯಿಂದ ಇರಬೇಡ ಎಂದಿದ್ದಕ್ಕೆ ಮಾಲೀಕ(ತಂದೆ)ನನ್ನು ಕೆಲಸಗಾರನೇ ಮಾರಕಾಸ್ತ್ರದಿಂದ ಹೊಡೆದು ಹತ್ಯೆಗೈದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರಸ್ತೆ ಬಳಿಯ ಎಸ್.ಬಿ ಟಿಂಬರ್ ಅಂಗಡಿಯಲ್ಲಿ ನಡೆದಿದೆ.
ಟಿಂಬರ್ ಅಂಗಡಿ ಮಾಲೀಕ ಸೈಯ್ಯದ್ ಅಸ್ಲಮ್ (60) ಹತ್ಯೆಯಾದವರು. ಆರೋಪಿ ಇಲಿಯಾಸ್(23) ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಏನಿದು ಘಟನೆ:
ಸೈಯ್ಯದ್ ಅಸ್ಲಮ್ ತನ್ನ ಸಹೋದರನ ಟಿಂಬರ್ ಅಂಗಡಿಯ ಮೇಲ್ವಿಚಾರಣೆ ಮಾಡುತ್ತಿದ್ದ. ಅದೇ ಅಂಗಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆರೋಪಿ ಇಲಿಯಾಸ್ ಸೈಯ್ಯದ್ನ ಮಗಳೊಂದಿಗೆ ಸಲುಗೆಯಿಂದ ಇರುತ್ತಿದ್ದ. ಇದನ್ನು ಸಹಿಸದ ಸೈಯ್ಯದ್, ಮಗಳ ತಂಟೆಗೆ ಬರಬೇಡ ಎಂದು ಎರಡ್ಮೂರು ಬಾರಿ ಆರೋಪಿಗೆ ಎಚ್ಚರಿಸಿದ್ದ.
ಪಾನಮತ್ತನಾಗಿ ಅಂಗಡಿ ಬಳಿ ಬಂದಿದ್ದ ಆರೋಪಿ ಹಾಗೂ ಸೈಯ್ಯದ್ ಅಸ್ಲಮ್ ನಡುವೆ ಇದೇ ವಿಚಾರವಾಗಿ ಗಲಾಟೆಯಾಗಿ ಸಿಟ್ಟಿಗೆದ್ದ ಆರೋಪಿ ಅಂಗಡಿಯಲ್ಲಿದ್ದ ಮಾರಕಾಸ್ತ್ರದಿಂದ ಹೊಡೆದು ಸೈಯ್ಯದ್‌ನನ್ನು ಹತ್ಯೆಗೈದಿರುವುದು ತನಿಖೆಯಿಂದ ತಿಳಿದು ಬಂದಿದೆ.
ಬೆಳಗ್ಗೆ ಕೊಲೆ ನಡೆದಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಮೃತನ ಹೆಸರು 60 ವರ್ಷದ ಸೈಯ್ಯದ್ ಅಸ್ಲಮ್ ಎಂದು ತಿಳಿದು ಬಂದಿದೆ. ಕೊಲೆಗೈದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ತಿಳಿಸಿದ್ದಾರೆ.