ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಕಳೆದ ವರ್ಷದಿಂದ ನಗರ ಪ್ರದೇಶದ ಹೊರಗೆ ವಾಹನಗಳು ಓಡಾಟ ನಡೆಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ರಾಮೀಣ ಭಾಗಗಳ ರಸ್ತೆ ಸಂಪರ್ಕ ಸಂಬಂಧಿಸಿದಂತೆ ಹಲವಾರು ಲೋಪದೋಷ ಮಾಡಿದ ಬಗ್ಗೆ ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದಿತ್ಯ ಆಮ್ಲಾನ್ ಬಿಸ್ವಾಸ್ ಹಾಗೂ ರಾಷ್ಟ್ರೀಯ ಹೆದ್ಧಾರಿಪ್ರಾಧಿಕಾರದ ಅಧಿಕಾರಿಗಳೊಂದಿಗೆ ಬೆಂಗಳೂರಿನ ವಿಕಾಸಸೌಧ ಕಚೇರಿಯಲ್ಲಿ ಅಪೂರ್ಣಗೊಂಡ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಶಾಸಕ ಟಿ.ರಘುಮೂರ್ತಿ ತಾಲ್ಲೂಕಿನ ವೀರದಿಮ್ಮನಹಳ್ಳಿ ಹಾಗೂ ಇತರೆ ಕಡೆಗಳಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕೂಡುವ ರಸ್ತೆಗೆ ಯಾವುದೇ ನಾಮಫಲಕ, ಸೂಚನಾ ಫಲಕ, ತಡೆಗೋಡೆ ಹಾಕದೆ ನಿರ್ಲಕ್ಷ್ಯೆ ವಹಿಸಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವ ಡಿ.ಸುಧಾಕರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ವಾಹನ ಓಡಾಟ ಆರಂಭವಾಗಿದೆ. ಹೆದ್ಧಾರಿ ಪ್ರಾಧಿಕಾರ ಮಾತ್ರ ಕೆಲವೆಡೆ ನಾಮಫಲಕ, ಸೂಚನಾ ಫಲಕ ಹಾಕದೆ ನಿರ್ಲಕ್ಷ್ಯೆ ವಹಿಸಿದೆ ಎಂದು ಆರೋಪಿಸಿದರಲ್ಲದೆ, ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಪ್ರತಿನಿತ್ಯವೂ ಈ ಸಮಸ್ಯೆಯ ಬಗ್ಗೆ ಅಲ್ಲಿನ ಗ್ರಾಮಸ್ಥರು ಮನವಿ ನೀಡುತ್ತಾರೆ. ಅಧಿಕಾರಿಗಳು ಮಾತ್ರ ಈಬಗ್ಗೆ ಯಾವುದೇ ಕ್ರಮವಹಿಸಿಲ್ಲ. ವಿಶೇಷವಾಗಿ ಈಗಾಗಲೇ ಕಳೆದ ಒಂದು ವರ್ಷದಿಂದ ಹತ್ತಕ್ಕೂ ಹೆಚ್ಚು ಪ್ರಾಣಾಂತಿಕ ಅಪಘಾತಗಳು ಜರುಗಿ ಪ್ರಾಣಾಹಾನಿಯೂ ಹಾಕಿದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯೆ ಎದ್ದುಕಾಣುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದರು.
ಪ್ರಾದೇಶಿಕ ಆಯುಕ್ತ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದಿತ್ಯ ಆಮ್ಲಾನ್ ಬಿಸ್ವಾಸ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಪಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ನಮಗೆ ಸಾರ್ವಜನಿಕರ ಹಿತಕಾಯುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಸರಣಿ ಅಪಘಾತಗಳು ನಡೆಯುತ್ತಿದ್ದು, ಜನರು ಪ್ರಾಣಚೆಲ್ಲುತ್ತಿದ್ಧಾರೆ. ಇದನ್ನು ಕೂಡಲೇ ಸರಿಪಡಿಸುವ ಭರವಸೆ ನೀಡಿದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಭೂಸ್ವಾಧಿನ ಅಧಿಕಾರಿ ವೆಂಕಟೇಶ್‌ನಾಯ್ಕ, ಹೈವೇ ಪ್ರಾದೇಶಿಕ ಅಧಿಕಾರಿ ರವಿತೇಜ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

