ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾರ್ತಿಕ ಮಾಸದ ಕೊನೆ ದಿನದ ಪ್ರಯುಕ್ತ ತಾಲ್ಲೂಕಿನಾದ್ಯಂತ ಲಕ್ಷ ದೀಪೋತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಿ ಪೂರ್ವಕವಾಗಿ ನಡೆದವು.
ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಲಕ್ಷ ದೀಪೋತ್ಸವ ನಡೆಯಿತು. ದೇವಾಲಯದಲ್ಲಿ ವಿಶೇಷ ಅಲಂಕಾರ, ದೇವರ ಉತ್ಸವ ನಡೆಸಲಾಯಿತು.
ನೂರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ದೀಪೋತ್ಸವದಲ್ಲಿ ಭಾಗವಹಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಸಪ್ತಮಾತೃಕಾ ಮಾರಿಯಮ್ಮ ದೇವಾಲಯ, ತೂಬಗೆರೆ ಪೇಟೆಯ ಗಣಪತಿ ದೇವಾಲಯದಲ್ಲಿ ವಿನಾಯಕ ಭಕ್ತ ಮಂಡಲಿಯಿಂದ ಲಕ್ಷ ದೀಪೋತ್ಸವ, ತೇರಿನ ಬೀದಿಯ ರಂಗಪ್ಪ ವೃತ್ತದ ಸರ್ವಶಕ್ತಿ ಮಾರಿಯಮ್ಮ ದೇವಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ಶ್ರೀವೈಕುಂಠ ಜನಾರ್ಧನಸ್ವಾಮಿ ದೇವಾಲಯಗಳಲ್ಲಿ ಧೀಪೋತ್ಸವ ಭಕ್ತಾದಿಗಳ ಗಮನ ಸೆಳೆದಿತ್ತು.
ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಸ್ವಾಮಿಗೆ ಹರಳು ಅಲಂಕಾರ ಮಾಡಲಾಗಿತ್ತು. ಕರೇನಹಳ್ಳಿಯಲ್ಲಿರುವ ಅಭಯ ಚೌಡೇಶ್ವರಿದೇವಿ ದೇವಾಲಯ ಕೊಂಗಾಡಿಯಪ್ಪ ರಸ್ತೆಯ ಬಯಲು ಬಸವಣ್ಣ ದೇವಾಲಯದಲ್ಲಿ ಲಕ್ಷ ದೀಪೋತ್ಸವ ನಡೆಯಿತು. ಸಾವಿರಾರು ಭಕ್ತ ಲಕ್ಷ ದೀಪೋತ್ಸವದಲ್ಲಿ ಬಾಗವಹಿಸಿ ದೀಪಗಳು ಹಚ್ಚುವ ಮೂಲಕ ಧನ್ಯತೆ ಮೆರೆದರು.

