ವಿಎ ಮತ್ತು ಆರ್ ಐಗಳಿಗೆ ಲ್ಯಾಪ್‌ಟಾಪ್- ಕೃಷ್ಣ ಬೈರೇಗೌಡ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಗೆ ಮುಂದಿನ 3 ತಿಂಗಳೊಳಗೆ ಲ್ಯಾಪ್‌ಟಾಪ್ ನೀಡುವ ಮೂಲಕ ಶೇ.
100 ರಷ್ಟು ಇಲಾಖೆಯ ಎಲ್ಲಾ ಕೆಲಸಗಳನ್ನು ಆನ್​ಲೈನ್​ ಅಡಿಯಲ್ಲಿ ತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಶನಿವಾರ ನಡೆದ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಸಭೆ ಸಂಬಂಧ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.

- Advertisement - 

ಕಂದಾಯ ಇಲಾಖಾ ಆಡಳಿತದಲ್ಲಿ ಪಾರದರ್ಶಕತೆ ತರಬೇಕು. ಸಚಿವರಿಂದ ವಿಎ ವರೆಗೂ ಎಲ್ಲರೂ ಇ-ಆಫೀಸ್ ಮೂಲಕವೇ ಕೆಲಸ ಮಾಡಬೇಕು. ಕಾಗದ ವ್ಯವಹಾರಕ್ಕೆ ಇತಿಶ್ರೀ ಹಾಡಬೇಕು ಎಂಬ ಏಕೈಕ ಕಾರಣಕ್ಕೆ ಕ್ಯಾಬಿನೆಟ್ ಅನುಮತಿಯೊಂದಿಗೆ ಈಗಾಗಲೇ 5000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಗೆ (ಆರ್ಐ) ಲ್ಯಾಪ್ಟಾಪ್​ ನೀಡುವ ಶೇ.100 ರಷ್ಟು ಇಲಾಖೆಯ ಎಲ್ಲಾ ಕೆಲಸಗಳನ್ನು ಆನ್​ಲೈನ್​ ಅಡಿಯಲ್ಲಿ ತರಲಾಗುವುದು ಎಂದು ಸಚಿವರು ತಿಳಿಸಿದರು.

ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 53 ಕೋಟಿ ಪುಟಗಳನ್ನು ಸ್ಕ್ಯಾನ್​ ಮಾಡಲಾಗಿದೆ. ಇನ್ನೂ 40 ಕೋಟಿ ಪುಟಗಳ ಸ್ಕ್ಯಾನ್​ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಫೆಬ್ರವರಿ ಕೊನೆಯ ಒಳಗೆ ಇದನ್ನು ಮುಗಿಸಬೇಕು ಎಂದು ಗಡುವು ನೀಡಲಾಗಿದೆ. ಅದಕ್ಕೆ ಅಗತ್ಯವಾದ ಕಂಪ್ಯೂಟರ್, ಸ್ಕ್ಯಾನರ್ ಹಾಗೂ ಡೇಟಾ ಎಂಟ್ರಿ ಆಪರೇಟರ್​ಗಳನ್ನು ಒದಗಿಸಿದ್ದೇವೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

- Advertisement - 

ಕೆಲವರಿಗೆ ದಾಖಲೆ ಕಳೆದುಹೋಗಿದೆ ಎಂದು ಬರೆದುಕೊಡುವ ಚಾಲಿ ಇದೆ. ಅಲ್ಲದೆ, ದಾಖಲೆಗಳನ್ನು ತಿದ್ದುವ ಕೆಲಸಗಳೂ ಈ ಹಿಂದೆ ಎಗ್ಗಿಲ್ಲದೆ ನಡೆದಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಹೀಗಾಗಿ ಇಂತಹ ಪ್ರವೃತ್ತಿಗೆ ತಡೆಯೊಡ್ಡಬೇಕು, ಮೂಲ ದಾಖಲೆಗಳು ಕಳೆದು ಹೋಗದಂತೆ ಹಾಗೂ ನಶಿಸಿ ಹೋಗದಂತೆ ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದ್ದು, ರೈತರು ತಮಗೆ ಯಾವ ದಾಖಲೆ ಬೇಕಿದ್ದರೂ ಆನ್​ಲೈನ್​ ಸರ್ಚ್​ ಮಾಡಿ ಅವರೇ ವೆರಿಫೈ ದಾಖಲೆ ಪಡೆಯುವಂತಾದರೆ ನಮ್ಮ ಉದ್ದೇಶ ಈಡೇರುತ್ತದೆ ಎಂದು ಸಚಿವರು ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಸರ್ವೆ ಮಾಡಲಾಗುತ್ತಿದೆ. ಸರ್ವೇ ಕಾರ್ಯಕ್ಕೆ ಸಹಕಾರಿಯಾಗಲು ಈಗಾಗಲೇ 600 ರೋವರ್ ಖರೀದಿ ಮಾಡಲಾಗಿದೆ. ಇನ್ನೂ 1000 ರೋವರ್​ಗಳನ್ನು ಖರೀದಿಗೆ ಮುಂದಾಗಲಾಗಿದೆ. ಇಲಾಖೆಯನ್ನು ಸಂಪೂರ್ಣ ಡಿಜಿಟಲೈಶೇಷನ್​ ಮಾಡಬೇಕು ಎಂದು ಪಣತೊಡಲಾಗಿದೆ. ಬಾಕಿ ಇದ್ದ ಸಮಸ್ಯೆಗಳನ್ನು ಹುಡುಕಿ ಪರಿಹಾರ ನೀಡಲಾಗುತ್ತಿದೆ. ಬಹುತೇಕ ಅಧಿಕಾರಿಗಳು ನಮ್ಮ ಉದ್ದೇಶಕ್ಕೆ ಪೂರಕವಾಗಿ ಜನಪರ ಕೆಲಸ ಮಾಡುತ್ತಿದ್ದಾರೆ. ನಮಗೆ ಸವಾಲಿನ ಅರಿವಿದೆ ಹಾಗೆ ಎರಡೂವರೆ ವರ್ಷದಲ್ಲಿ ನಾವು ಸಾರ್ಥಕ ಕೆಲಸವನ್ನೂ ಮಾಡಿದ್ದೇವೆ. ಮುಂದೆ ಮಾಡಬೇಕಾದ ಕೆಲಸಗಳೂ ಸಾಕಷ್ಟಿದ್ದು, ಕಂದಾಯ ಇಲಾಖೆಯನ್ನು ಜನಸ್ನೇಹಿಗೊಳಿಸಲು ಶ್ರಮಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು. 

ತಹಶೀಲ್ದಾರ್ ನ್ಯಾಯಾಲಯ?
ತಹಶಿಲ್ದಾರ್​ ಹಾಗೂ ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಶೀಘ್ರ ವಿಲೇವಾರಿ ಬಗ್ಗೆಯೂ ಗಮನ ಸೆಳೆದ ಸಚಿವರು
, ನಾವು ಕಂದಾಯ ಇಲಾಖೆ ಅಧಿಕಾರ ಸ್ವೀಕಾರ ಮಾಡುವ ಮುನ್ನ ತಹಶೀಲ್ದಾರ್ ನ್ಯಾಯಾಲಯದಲ್ಲಿ 10,774 ಪ್ರಕರಣಗಳು ಅವಧಿ ಮೀರಿಯೂ ನ್ಯಾಯ ತೀರ್ಮಾನವಾಗದೆ ಬಾಕಿ ಇದ್ದವು. ಆದರೆ ಆ ಸಂಖ್ಯೆ 526ಕ್ಕೆ ಇಳಿಸಲಾಗಿದೆ ಎಂದರು.

ಅದೇ ರೀತಿ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೂ 6 ತಿಂಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಬೇಕು ಎಂಬ ನಿಯಮ ಇದ್ದರೂ 1 ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ 59,339 ಪ್ರಕರಣಗಳು ಬಾಕಿ ಇದ್ದವು. ಆದರೆ, ವಿಶೇಷ ಎಸಿ ಗಳನ್ನು ನೇಮಕ ಮಾಡುವ ಮೂಲಕ ಆ ಸಂಖ್ಯೆಯನ್ನೂ ಸಹ ಇದೀಗ 9954 ಕ್ಕೆ ಇಳಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಗ್ರಾಮ ಆಡಳಿತ ಅಧಿಕಾರಿ (ವಿಎ) ತಿಂಗಳಿಗೆ ಕಡ್ಡಾಯ 100 ಪೌತಿ ಖಾತೆ ಮಾಡಲು ಗುರಿ ನಿಗದಿಪಡಿಸಿದ್ದೇವೆ. ಪ್ರಗತಿ ಸಾಧಿಸುವ ವಿಎಗಳಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಸಹ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವ ಕೃಷ್ಣಭೈರೇಗೌಡರು ತಿಳಿಸಿದರು.

 

Share This Article
error: Content is protected !!
";