ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಲಾಠಿ ಚಾರ್ಜ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಕೋಲಾಹಲಕ್ಕೆ ಕಾರಣವಾಯಿತು.
ಪ್ರತಿಪಕ್ಷದ ಶಾಸಕರು ಕಲಾಪ ಆರಂಭಗೊಳ್ಳುತ್ತಿದ್ದಂತೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಈ ವೇಳೆ
, ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚಕ ನಿರ್ಣಯವನ್ನು ಪ್ರಸ್ತಾಪಿಸಿದರು.

ಆಗ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಹಿರಿಯ ಸದಸ್ಯರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಅರಗ ಜ್ಞಾನೇಂದ್ರ, ಸುನಿಲ್‌ಕುಮಾರ್ ಮತ್ತು ಇತರರು ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಈ ಮನೆಯಲ್ಲಿ ನಮ್ಮ ನಿಮ್ಮ ಹಾಗೆ ಜನಸೇವೆ ಮಾಡಿದ್ದ ಇಬ್ಬರು ಶಾಸಕರಾದ ಜಯಣ್ಣ ಮತ್ತು ಆರ್.ನಾರಾಯಣ್ ಅವರು ನಮ್ಮನ್ನು ಅಗಲಿದ್ದಾರೆ. ಅವರಿಗೆ ಮೊದಲು ಸಂತಾಪ ಸೂಚನೆ ಮಂಡಿಸಿ ಅವರ ಕುಟುಂಬದ ದುಃಖ ಕಡಿಮೆ ಮಾಡುವುದು ನಮ್ಮ ಕರ್ತವ್ಯ. ಮೊದಲು ಅದಕ್ಕೆ ಅವಕಾಶ ಮಾಡಿಕೊಡಿ. ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.

ಇದು ಉತ್ಸಾಹ ಅಲ್ಲ, ನೋವು ಎಂದು ಬಿಜೆಪಿಯ ಸುನಿಲ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆ ನೋವಿಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿರುಗೇಟು ನೀಡಿದರು. ಆಗ, ಮಾತಿನ ಚಕಮಕಿ ನಡೆಯಿತು.

ಪ್ರತಿಪಕ್ಷದ ಸದಸ್ಯರನ್ನು ಸಮಾಧಾನಪಡಿಸಿದ ಸ್ಪೀಕರ್, ಪ್ರತಿಪಕ್ಷದವರು ಪ್ರಸ್ತಾಪಿಸುವ ವಿಷಯಕ್ಕೆ ಸಂತಾಪ ಸೂಚನೆ ಬಳಿಕ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ನಂತರ ಸಂತಾಪ ಸೂಚನಾ ನಿರ್ಣಯ ಕೈಗೆತ್ತಿಕೊಂಡರು.

 

- Advertisement -  - Advertisement - 
Share This Article
error: Content is protected !!
";