ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಂಕ್ಲೇವ್–2026ಕ್ಕೆ ಭವ್ಯ ಚಾಲನೆ ನೀಡಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
‘ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗೋಣ!’ ಎಂಬ ಘೋಷ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಇಂದಿನಿಂದ 3 ದಿನಗಳ ಕಾಲ ನಡೆಯುಲಿರುವ ‘ವೀರಶೈವ ಲಿಂಗಾಯತ ಜಾಗತಿಕ ವ್ಯಾಪಾರ ಸಮಾವೇಶ 2026’ ವನ್ನು ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ಆಮಂತ್ರಿತ ಸಜ್ಜನ ಮಿತ್ರರೊಂದಿಗೆ ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿದರು.
ಸಮುದಾಯದ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಹಾನಗಲ್ ಕುಮಾರಸ್ವಾಮಿ, ಹರತಾಳ ರುದ್ರಗೌಡರು, ಸಿರಸಂಗಿ ಲಿಂಗರಾಜ ದೇಸಾಯಿ ಅವರ ಕೊಡುಗೆಗಳನ್ನು ಇದೇ ವೇಳೆ ಸ್ಮರಿಸಿದರು.
ಸಮುದಾಯದ ಯಶಸ್ವಿ ಉದ್ಯಮಿಗಳಾದ ವಿಆರ್ ಎಲ್ ಸಮೂಹದ ವಿಜಯ್ ಸಂಕೇಶ್ವರ, ರಮಣಶ್ರೀ ಸಂಸ್ಥೆಯ ಷಡಾಕ್ಷರಿ ಮೊದಲಾದವರ ಹಾಗೂ ಏಕಸ್ ಸಂಸ್ಥೆಯ ಮೂಲಕ ಕರ್ನಾಟಕದ ಕೀರ್ತಿಯನ್ನು ಜಗದಗಲ ಬೆಳಗುತ್ತಿರುವ ಅರವಿಂದ ಮೆಳ್ಳಿಗೇರಿ ಅವರ ಸಾಧನೆ ಮತ್ತು ಕೊಡುಗೆಗಳನ್ನು ಸಚಿವರು ವಿವರಿಸಿದರು.
ಈ ಎಲ್ಲ ಮಹನೀಯರ ಸಾಧನೆಗಳನ್ನು ಸ್ಫೂರ್ತಿಯಾಗಿ ಪಡೆದು ನಮ್ಮ ಯುವ ಉದ್ಯಮಿಗಳು ಉದ್ಯಮ ಸ್ಥಾಪಿಸಿ, ಉದ್ಯಮ ವಲಯದಲ್ಲಿ ಯಶಸ್ವೀ ಹೆಜ್ಜೆ ಇರಿಸಬೇಕು ಎಂದು ಸಚಿವರು ಕರೆ ನೀಡಿದರು.
ವೀರಶೈವ ಲಿಂಗಾಯತ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ನಡೆಯುತ್ತಿರುವ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್ ಕ್ಲೇವ್ – 2026′ ಸ್ಫೂರ್ತಿಯುತವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿ ಉದ್ಯಮಿಗಳು ಉದಯಿಸಲಿದ್ದಾರೆಂಬ ವಿಶ್ವಾಸ ಮೂಡಿಸಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂಪುಟದ ಸಹೋದ್ಯೋಗಿ ಈಶ್ವರ ಖಂಡ್ರೆ, ಶಾಸಕ ಗಣೇಶ್ ಹುಕ್ಕೇರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಎಂಡಿ ಅರುಣ್ ಕುಮಾರ್ ಹಡಗಲಿ, ಉದ್ಯಮಿಗಳು, ಯುವ ಉದ್ಯಮಿಗಳು, ಚಿಂತಕರು ಇಂದಿನ ಬೃಹತ್ ಸಮಾವೇಶದಲ್ಲಿ ಉಪಸ್ಥಿತರಿದ್ದರು.

