ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಜನಾಕ್ರೋಶ ಭುಗಿಲೆದ್ದಿರುವುದನ್ನು ನೋಡಿಕೊಂಡು ನಾವುಗಳು ಸುಮ್ಮನೆ ಕೂರಲು ಆಗಲ್ಲ. ನಾಡಿನ ಜನರ ರಕ್ಷಣೆ ಹೊಣೆ ನಮ್ಮ ಮೇಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏ.೭ ರಂದು ಮೈಸೂರಿನಿಂದ ಆರಂಭಗೊಂಡ ಜನಾಕ್ರೋಶ ಮೂರನೆ ಹಂತದ ಯಾತ್ರೆ ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಮೂಲಕ ಏ.೨೫ ರಂದು ಚಿತ್ರದುರ್ಗಕ್ಕೆ ಆಗಮಿಸಲಿದೆ. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್‌ರವರ ಹತ್ಯೆಯಾಗಿರುವುದು ಮೇಲ್ನೋಟಕ್ಕೆ ಅವರ ಪತ್ನಿಯಿಂದ ಎನ್ನುವುದು ಬಹಿರಂಗಗೊಂಡಿದೆಯಾದರೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಸತ್ಯಾಂಶ ಹೊರಬರುವುದಿಲ್ಲ. ಪರಶುರಾಮ್ ಚಲವಾದಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಾಸಕ ಮತ್ತು ಅವರ ಪುತ್ರನ ಮೇಲೆ ಎಫ್.ಐ.ಆರ್.
ದಾಖಲಾಗಿದ್ದರೂ ಇದುವರೆವಿಗೂ ಯಾರನ್ನು ಬಂಧಿಸಿಲ್ಲ. ಸಚಿನ್ ಪಾಂಚಾಳ, ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್, ರುದ್ರಣ್ಣ ಯಳವಣ್ಣನವರ್, ವಿನಯ್ ತಿಮ್ಮಯ್ಯ ಇವರುಗಳ ಸಾವಿನ ಬಗ್ಗೆ ಚಕಾರವೆತ್ತದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ನಡೆದಿಲ್ಲವೇನೋ ಎನ್ನುವಂತಿದ್ದಾರೆಂದು ಆಪಾದಿಸಿದರು.
ಜಾತಿ ಗಣತಿಯಲ್ಲಿ ಜಾತಿ ಜಾತಿಗಳ ಮಧ್ಯೆ ಒಡಕು ಮೂಡಿಸಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಂತರಾಜ್ ವರದಿಯನ್ನು ಎಲ್ಲಿ ಮುಚ್ಚಿಟ್ಟಿದೆ. ಪರಿಶಿಷ್ಟ ಜಾತಿಯಲ್ಲಿರುವುದು ನೂರ ಒಂದು ಜಾತಿ. ಆದರೆ ೧೮೨ ಜಾತಿಗಳು ಹೇಗೆ ಬರಲು ಸಾಧ್ಯ? ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸಲ್ಮಾನರನ್ನು ಜಾತಿ ಗಣತಿಯಲ್ಲಿ ಬಹುಸಂಖ್ಯಾತರನ್ನಾಗಿ ತೋರಿಸಿ ವಂಚಿಸುತ್ತಿದ್ದಾರೆ. ಎಸ್ಸಿಪಿ. ಟಿಎಸ್ಪಿ. ಹಣ ಹದಿನಾಲ್ಕು ಸಾವಿರ ಕೋಟಿ ರೂ.ಗಳನ್ನು ಉಚಿತ ಗ್ಯಾರೆಂಟಿಗಳಿಗೆ ಬಳಸಿದೆ. ಇನ್ನಾದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಕಾಂಗ್ರೆಸ್‌ನಿಂದ ಹೊರ ಬರುವಂತೆ ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದರು.
ಕಾಂಗ್ರೆಸ್ ದಲಿತರ ಪರವಾಗಿಲ್ಲ ಎನ್ನುವುದು ಗೊತ್ತಿದ್ದರೂ ಆ ಪಕ್ಷದಲ್ಲಿನ ನಾಯಕರುಗಳು ಗುಲಾಮಗಿರಿಯಲ್ಲಿದ್ದಾರೆ. ವಕ್ಫ್ ವಿಚಾರದಲ್ಲಿ ಪಶ್ಚಿಮ ಬಂಗಾಳದಲ್ಲಿ ದಲಿತರ ಕಗ್ಗೊಲೆಯಾಗುತ್ತಿದ್ದರೂ ಏಕೆ ಸೊಲ್ಲೆತ್ತುತ್ತಿಲ್ಲ. ಕಂಬಾಲಪಲ್ಲಿಯಲ್ಲಿ ಏಳು ದಲಿತರ ಸಜೀವ ದಹನವಾಯಿತು. ದಲಿತರಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಮೂಗಿಗೆ ತುಪ್ಪ ಸವರುವ ಕೆಲಸ ಕಾಂಗ್ರೆಸ್‌ನಿಂದ ನಡೆಯುತ್ತಿದೆ.
ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಸೋಲಿಸಿದ್ದು, ಕಾಂಗ್ರೆಸ್. ನ್ಯಾಷನಲ್ ಹೆರಾಲ್ಡ್ ಹಗರಣ. ಕಾಂಗ್ರೆಸ್ ಎಂದರೆ ಕರಪ್ಟ್. ದೇಶದಲ್ಲಿ ಹದಿನಾಲ್ಕರಿಂದ ಹದಿನೈದು ಲಕ್ಷ ಎಕರೆ ವಕ್ಫ್ ಭೂಮಿಯಿದೆ. ಒಂದು ಎಕರೆಯನ್ನು ಸರ್ಕಾರ ವಾಪಸ್ ಪಡೆದಿಲ್ಲ. ಕಾಂಗ್ರೆಸ್ ಗಿರವಿ ಅಂಗಡಿಯಿದ್ದಂತೆ ಅಲ್ಲಿಗೆ ಹೋದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರಿಗೆ ಉಳಿಗಾಲವಿಲ್ಲ. ಗರೀಭಿ ಹಠಾವೊ ಅಗಿಲ್ಲ. ಇಂತಹ ಕೆಟ್ಟ ಸರ್ಕಾರದ ವಿರುದ್ದ ಜನಾಕ್ರೋಶ ಯಾತ್ರೆ ಆರಂಭಗೊಂಡಿದೆ ಎಂದರು.
ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್, ಕಾರ್ಯದರ್ಶಿ ಮೋಹನ್, ಯುವ ಮುಖಂಡ ಡಾ.ಸಿದ್ದಾರ್ಥ, ಛಲವಾದಿ ತಿಪ್ಪೇಸ್ವಾಮಿ, ವಕ್ತಾರ ನಾಗರಾಜ್‌ಬೇದ್ರೆ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.