ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಸಂಸದ ಇ.ತುಕಾರಾಮ್, ಶಾಸಕ ಭರತ್ ರೆಡ್ಡಿ ಸೇರಿದಂತೆ ಹಲವರ ಮನೆಗಳ ಮೇಲೆ ಇ.ಡಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಬೆಳಗಿನ ಜಾವ 4 ರಿಂದ 5 ಗಂಟೆಯ ಸುಮಾರಿಗೆ ಸಂಸದ ಇ.ತುಕಾರಾಮ್, ಮಾಜಿ ಶಾಸಕ ನಾಗೇಂದ್ರ ಮತ್ತು ಅವರ ಆಪ್ತ ಕಾರ್ಯದರ್ಶಿ (ಪಿಎ) ಗೋವರ್ಧನ್, ಶಾಸಕ ಭರತ್ ರೆಡ್ಡಿ, ಡಾ.ಎನ್.ಟಿ.ಶ್ರೀನಿವಾಸ್ ಮತ್ತು ಕಂಪ್ಲಿ ಗಣೇಶ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆಗಳು ಹಾಗೂ ಲ್ಯಾಪ್‌ಟಾಪ್, ಮೊಬೈಲ್, ಬ್ಯಾಂಕ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಗರಣ ಹಣವನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ( ಇ.ಡಿ)ವು ಬುಧವಾರ ಬೆಳಗ್ಗೆ ದಾಳಿ ನಡೆಸಿದೆ.
ಸಂಸದ ಇ. ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಶಾಸಕ ಬಿ. ನಾಗೇಂದ್ರ ಅವರ ಆಪ್ತ ಗೋವರ್ಧನ್ ರೆಡ್ಡಿ ಸೇರಿದಂತೆ ಹಲವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ದಾಳಿ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು ತಮ್ಮ ನಿವಾಸಗಳಲ್ಲಿ ಇದ್ದರು ಎನ್ನಲಾಗಿದೆ.
ಸಂಸದರು ಮತ್ತು ಶಾಸಕರ ಮನೆಗಳ ಮೇಲೆ ಯಾವ ಪ್ರಕರಣದಲ್ಲಿ ಇಡಿ ದಾಳಿ ನಡೆದಿದೆ ಎಂಬುದು ಖಚಿತವಾಗಿಲ್ಲ. ಆದರೆ, ನಾಗೇಂದ್ರ ಆಪ್ತ ಗೋವರ್ಧನ್ ರೆಡ್ಡಿ ಮನೆ ಮೇಲೆ ದಾಳಿ ನಡೆದಿರುವುದರಿಂದ ಇದು ವಾಲ್ಮೀಕಿ ನಿಗಮದ ಹಗರಣದ ತನಿಖೆಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ನಿಗಮದ ಹಣವನ್ನು ಬಳಸಲಾಗಿದೆ ಎಂಬ ಆರೋಪವಿದ್ದು, ಸುಮಾರು 20 ಕೋಟಿ ಹಣವನ್ನು ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಿಗೆ ಹಂಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಡಿ ಅಧಿಕಾರಿಗಳು ಎಂಟು ತಂಡಗಳಲ್ಲಿ ಕಾರ್ಯಾಚರಣೆ ಮಾಡಿ ಶಾಸಕರು ಹಾಗೂ ಸಂಸದರ ನಿವಾಸ ಹಾಗೂ ಗೃಹ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ.
ಬಳ್ಳಾರಿ ಗ್ರಾಮಾಂತರ, ಕಂಪ್ಲಿ, ಕೂಡ್ಲಿಗಿ, ಸಂಡೂರು ಕ್ಷೇತ್ರಗಳಲ್ಲಿ ವಾಲ್ಮೀಕಿ ಹಗರಣದ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಪ್ರತಿ ಮತದಾರರಿಗೆ ಶಾಸಕರ ಮೂಲಕ ಮತದಾರರಿಗೆ ಇನ್ನೂರು ರೂಪಾಯಿಯಂತೆ ಹಣ ಹಂಚಿಕೆ ಮಾಡಲಾಗಿದೆ. ಪ್ರಮುಖ ಪಾತ್ರದಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿದ್ದು, ಶಾಸಕ ಮತ್ತು ಸಂಸದರು ಈ ವಹಿವಾಟಿನಲ್ಲಿ ಭಾಗಿಯಾಗಿರಬಹುದು ಎಂದು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಯಾರ್ಯಾರ ಮನೆ ಮೇಲೆ ದಾಳಿ?
ಬಳ್ಳಾರಿಯಲ್ಲಿ 5 ಸ್ಥಳ, ಬೆಂಗಳೂರಿನಲ್ಲಿ 3 ಕಡೆ ಇಡಿ ದಾಳಿ ನಡೆದಿದ್ದು, ಬಳ್ಳಾರಿ ಸಂಸದ ಇ.ತುಕಾರಾಂ, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾಭರತ್ ರೆಡ್ಡಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಮತ್ತು ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ಸಂಸದ ಇ.ತುಕಾರಾಂ ಅವರ ಸಂಡೂರಿನ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಿಂದ 2 ಕಿ.ಮೀ. ದೂರದಲ್ಲಿ ರಸ್ತೆಗೆ ಬ್ಯಾರಿಕೇಡ್ ಅವಳಡಿಕೆ ಮಾಡಲಾಗಿದೆ.
ಲೋಕಸಭಾ ಚುನಾವಣೆ ವೇಳೆ ಹಣ ಹಂಚಿಕೆ ಬಗ್ಗೆ ಇಡಿ ವಿಚಾರಣೆ ನಡೆಸಿದ್ದು, ಅಧಿಕಾರಿಗಳ ಪ್ರಶ್ನೆಗಳಿಗೆ ಸಂಸದ ತುಕಾರಾಂ ಕಕ್ಕಾಬಿಕ್ಕಿಯಾಗಿದ್ದಾರೆ ಎನ್ನಲಾಗಿದೆ.
ಇಡಿ ಅಧಿಕಾರಿಗಳು ಶಾಸಕ ಬಿ.ನಾಗೇಂದ್ರ ಅವರ ಪಿಎ ಬಳಿ ಸಿಕ್ಕ ಡೈರಿ ಆಧಾರವಾಗಿಟ್ಟುಕೊಂಡು ಪ್ರಶ್ನೆ ಮಾಡಿದ್ದು, ಅಧಿಕಾರಿಗಳ ಪ್ರಶ್ನೆಗಳಿಗೆ ತನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ ಎನ್ನಲಾಗಿದೆ.
ಕಂಪ್ಲಿ ಶಾಸಕ ಜೆಎನ್ ಗಣೇಶ್ ನಿವಾಸ ಮತ್ತು ಕಚೇರಿಯಲ್ಲಿ 10 ಕ್ಕೂ ಹೆಚ್ಚು ಅಧಿಕಾರಿಗಳಿಂದ ಶೋಧ ಮಾಡಲಾಗುತ್ತಿದ್ದು, ಹಣ ಹಂಚಿಕೆ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದೇ ರೀತಿಯಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ರೆಡ್ಡಿ ಮತ್ತು ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ನಿವಾಸದ ಮೇಲೆ ಕೂಡ ಇಡಿ ಅಧಿಕಾರಿಗಳು ದಾಳಿ ಮಾಡಿಲಾಗಿದೆ. ಬಿ.ನಾಗೇಂದ್ರಗೆ ಸೇರಿದ ಬೆಂಗಳೂರಿನಲ್ಲಿ ಶಾಸಕರ ಭವನದ ಕೊಠಡಿ ನಂಬರ್ 360ರಲ್ಲಿ ಮೇಲೂ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ತನಿಖೆ ಮುಗಿದಿದೆ ಎನ್ನುವ ಹೊತ್ತಿನಲ್ಲೇ ಮತ್ತೆ ದಾಳಿ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿ, ಸಂಸದರು, ಶಾಸಕರು ಸೇರಿದಂತೆ ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ. ಯಾವುದೇ ಕಾರಣಕ್ಕೂ ತಪ್ಪುಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಯಾವ ಕ್ಷೇತ್ರಕ್ಕೆ ಎಷ್ಟು ಹಂಚಿಕೆ?
ಬಳ್ಳಾರಿ ಗ್ರಾಮಾಂತರ – 5,23,72,400 ರೂ.
ಬಳ್ಳಾರಿ ನಗರ – 3,75,00,000 ರೂ.
ಕಂಪ್ಲಿ – 3,38,00,000 ರೂ.
ಕೂಡ್ಲಿಗಿ – 3,16,00,00 ರೂ.