ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿರವರ ಮೇಲೆ ನ್ಯಾಯಾಲಯದ ಕಾರ್ಯಕಲಾಪದ ವೇಳೆಯಲ್ಲಿ ಶೂ ಎಸೆದು ಅಗೌರವ ಮಾಡಿರುವ ನ್ಯಾಯವಾದಿ ರಾಕೇಶ್ ಕಿಶೋರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಮಾನ ಮನಸ್ಕರ ವಕೀಲರ ಬಳಗದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಷ್ಟ್ರಪತಿರವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವ ವಕೀಲ ರಾಕೇಶ್ ಕಿಶೋರ್ ಸಂವಿಧಾನಕ್ಕೆ ಅವಮಾನ ಮಾಡಿರುವುದು ಕ್ಷಮಿಸಲಾರದಂತ ಅಪರಾಧ, ಇದರ ಹಿಂದೆ ಪಟ್ಟಭದ್ರಾ ಹಿತಾಸಕ್ತಿಗಳ ಕೈವಾಡವಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ಮುಖ್ಯ ನ್ಯಾಯಮೂರ್ತಿ ಗವಾಯಿರವರಿಗೆ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ವಕೀಲರುಗಳಾದ ಎಸ್.ವಿಜಯಕುಮಾರ್, ದಿಲ್‌ಶಾದ್ ಉನ್ನಿಸ, ಬಿ.ಎಂ.ಹನುಮಂತಪ್ಪ, ಚಂದ್ರಣ್ಣ, ಜಗದೀಶ್ ಗುಂಡೇರಿ, ಸುದರ್ಶನ್, ಗಂಗಾಧರ್, ಅಶೋಕ್ ಬೆಳಗಟ್ಟ, ಸುರೇಶ್, ದಿವ್ಯಚಂದ್ರ, ಕವಿ ಅರಸಿ, ಅನುಷ ಬಿಂದು ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

