ಶಾಸಕ ವೀರೇಂದ್ರ ಪಪ್ಪಿ ಅವರನ್ನ ಅಕ್ರಮವಾಗಿ ಬಂಧಿಸಲಾಗಿದೆ- ಪತ್ನಿ ಆರ್.ಡಿ.ಚೈತ್ರಾ ಪರ ವಕೀಲರು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ. ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ನಿಯಮಗಳನ್ನು ಉಲ್ಲಂಘಿಸಿ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ವೀರೇಂದ್ರ ಪತ್ನಿ ಆರ್.ಡಿ.ಚೈತ್ರಾ ಪರ ವಕೀಲರು ಹೈಕೋರ್ಟ್​ಗೆ ತಿಳಿಸಿದ್ದಾರೆ.

ಚಿತ್ರದುರ್ಗದ ಶಾಸಕರಾದ ತಮ್ಮ ಪತಿ ಕೆ.ಸಿ.ವೀರೇಂದ್ರ ಅವರನ್ನು ಪಿಎಂಎಲ್ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಬಂಧಿಸಿರುವ ಕ್ರಮ ಕಾನೂನು ಬಾಹಿರ ಎಂದು ಘೋಷಿಸುವಂತೆ ಕೋರಿ ಚೈತ್ರಾ ಅರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ಪೀಠಕ್ಕೆ ಅರ್ಜಿದಾರರ ಪರ ವಕೀಲರು ವಿವರಿಸಿದರು.
ವೀರೇಂದ್ರ ಹೆಸರಿಲ್ಲ:

- Advertisement - 

ವೀರೇಂದ್ರ ಪಪ್ಪಿ ವಿರುದ್ಧ 2011ರ ಕ್ರಿಕೆಟ್ ಬೆಟ್ಟಿಂಗ್ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆ ಪ್ರಕರಣದ ಆರೋಪಗಳಿಂದ 2014ರಲ್ಲಿ ಅವರು ಖುಲಾಸೆಯಾಗಿದ್ದರು. ಇದೇ ಪ್ರಕರಣ ಸಂಬಂಧ 2015ರ ಮತ್ತೊಂದು ಎಫ್ಐಆರ್ ಅನ್ನು ಹೈಕೋರ್ಟ್ ರದ್ದು ಮಾಡಿದೆ. 2016ರಲ್ಲಿ ದಾಖಲಾದ ಪ್ರಕರಣದಲ್ಲಿ ಕೆ.ಸಿ.ವೀರೇಂದ್ರ ಅವರು ಆರೋಪಿಯಾಗಿರಲಿಲ್ಲ. 2022ರ ದಾಖಲಾದ ಪ್ರಕರಣ ಸಂಬಂಧ ಆರೋಪಪಟ್ಟಿಯಲ್ಲಿ ವೀರೇಂದ್ರ ಅವರ ಹೆಸರನ್ನು ಕೈಬಿಡಲಾಗಿತ್ತು.

ಮತ್ತೆರಡು ಪ್ರಕರಣಗಳು 2024ರಲ್ಲಿ ಮುಕ್ತಾಯಗೊಂಡಿವೆ ಎಂದು ವಕೀಲರು ತಿಳಿಸಿದರು.
ಸೂಕ್ತ ಕಾರಣ ನೀಡದೇ ಪಪ್ಪಿ ಬಂಧನ: ವೀರೇಂದ್ರ ಅವರು ಸಿಕ್ಕಿಂನಲ್ಲಿ ಇದ್ದಾಗ ಮನೆ, ವ್ಯಾಪಾರ ಸ್ಥಳದಲ್ಲಿ ಇ.ಡಿ ದಾಳಿ ನಡೆಸಿದೆ. ಅಂದರೆ ವೀರೇಂದ್ರ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. ಪಿಎಂಎಲ್ ಕಾಯ್ದೆಯಡಿ ಯಾವುದೇ ಅನುಸೂಚಿತ ಪ್ರಕರಣ ಇಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ.

- Advertisement - 

ಪಿಎಂಎಲ್ ಕಾಯ್ದೆಯಡಿ ಶಾಸಕರನ್ನು ಬಂಧಿಸುವ ಮುನ್ನ ಸಮನ್ಸ್ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಬಂಧನ ಮಾಡುವವರೆಗೂ ಸಮನ್ಸ್ ನೀಡಿಲ್ಲ. ಬಂಧನ ಮೆಮೊವನ್ನು ಸಕಾಲಕ್ಕೆ ನೀಡಿಲ್ಲ. ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ವಕೀಲರು ವಿವರಣೆ ಕೊಟ್ಟರು.

ಇ.ಡಿ ಅಧಿಕಾರಿಗಳು ವಿವೇಚನೆ ಬಳಸಿಲ್ಲ: ಮತ್ತೆ ಕೆಲ ಪ್ರಕರಣಗಳಲ್ಲಿ ವೀರೇಂದ್ರ ಅವರ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ಇ.ಡಿ ಅಧಿಕಾರಿಗಳು ವೀರೇಂದ್ರ ಅವರ ಬಂಧನದಲ್ಲಿ ಸೂಕ್ತವಾಗಿ ವಿವೇಚನೆ ಬಳಸಿಲ್ಲ. ಆದ್ದರಿಂದ ಬಂಧನವನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಬೇಕು ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ಕಾಲಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿ ಆದೇಶಿಸಿತು.

 

 

Share This Article
error: Content is protected !!
";