ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದೇಶದ ಪ್ರಧಾನಿ ನರೇಂದ್ರಮೋದಿರವರು ಹನ್ನೊಂದು ವರ್ಷಗಳ ಜನಸೇವೆಯಲ್ಲಿ ದಾಪುಗಾಲಿಡುತ್ತಿದ್ದಾರೆ. ಕಳಂಕವಿಲ್ಲದ ನಾಯಕತ್ವ ಅವರದು. ರಾಜನೀತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶಂಶಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹದಿನಾಲ್ಕು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ ದೇಶದ ಪ್ರಧಾನಿಯಾಗಿ ಹನ್ನೊಂದು ವರ್ಷಗಳಾಗಿದೆ. ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ಎನ್ನುವ ತತ್ವದಡಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದರಿಂದ ದೇಶ ಸರ್ವತೋಮುಖ ಅಭಿವೃದ್ದಿಯತ್ತ ಸಾಗುತ್ತಿದೆ. ವಿರೋಧ ಪಕ್ಷದವರು ಟೀಕಿಸುವುದು ಸಹಜ. ಸತ್ಯ ಮರೆಮಾಚಿ ಆಪಾದನೆ ಮಾಡುತ್ತಿರುವುದನ್ನು ಯಾರು ಒಪ್ಪುವುದಿಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ಹಗರಣದಲ್ಲಿ ಸಿಲುಕುತ್ತಿದೆ. ವಾಲ್ಮೀಕಿ ನಿಗಮ, ಮುಡಾ ಕೇಸ್‌ನಲ್ಲಿ ೧೦೦ ಕೋಟಿ ರೂ. ಭ್ರಷ್ಟಾಚಾರ. ಈಗ ಆರ್.ಸಿ.ಬಿ. ಕಪ್ ಗೆದ್ದಿದ್ದಕ್ಕಾಗಿ ತರಾತುರಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದಕ್ಕೆ ಹನ್ನೊಂದು ಮಂದಿ ಕಾಲ್ತುಳಿತದಲ್ಲಿ ಬಲಿಯಾಗಿದ್ದಾರೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕಾಲ್ತುಳಿತದಿಂದ ಹನ್ನೊಂದು ಮಂದಿ ಬಲಿಯಾಗಿದ್ದಕ್ಕೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿರುವುದು ಯಾವ ನ್ಯಾಯ? ತಪ್ಪು ಮಾಡಿರುವುದು ಸರ್ಕಾರ. ಹೈಕಮಾಂಡ್ ಸಿದ್ದರಾಮಯ್ಯ, ಡಿ.ಕೆ.ಶಿ.ಯವರನ್ನು ದೆಹಲಿಗೆ ಕರೆಸಿಕೊಂಡು ಮರು ಜಾತಿಗಣತಿ ಮಾಡುವಂತೆ ಉಪಾಯ ಹೇಳಿಕೊಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರ ಮಾಡುತ್ತಿದೆ ಎಂದು ಟೀಕಿಸಿದರು.
ಈಗಾಗಲೆ ಜಾತಿ ಗಣತಿಗೆ ೨೫೦ ಕೋಟಿ ರೂ.ಗಳ ಖರ್ಚಾಗಿದೆ. ಹೈಕಮಾಂಡ್ ಹೇಳಿದಂತೆ ರಾಜ್ಯ ಸರ್ಕಾರ ಮರು ಜಾತಿ ಗಣತಿ ನಡೆಸುವಂತಿಲ್ಲ. ಸಂವಿಧಾನದ ಪ್ರಕಾರ ಜಾತಿ ಗಣತಿಯಾಗಬೇಕು. ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ದೇಶದ ಜನತೆಗೆ ನೀಡುತ್ತಿದೆ. ರಾಜ್ಯ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಅಧಿಕಾರದ ದಾಹ ಬಿಡುತ್ತಿಲ್ಲ. ನಲವತ್ತು ಕೋಟಿ ಜನರಿಗೆ ಕೇಂದ್ರ ಸರ್ಕಾರ ಜನಧನ್ ಬ್ಯಾಂಕ್ ಖಾತೆಯನ್ನು ತೆರೆದಿದೆ.
ರೈತರಿಗೆ ಆರು ಸಾವಿರ ರೂ.ಪಿಂಚಣಿ ಕೊಡುತ್ತಿದೆ. ನಲ್ಸೆ ಜಲ್, ಹೆದ್ದಾರಿ ನಿರ್ಮಾಣ, ರೈಲ್ವೆ ಮತ್ತು ರೈಲು ನಿಲ್ದಾಣಗಳ ಪರಿವರ್ತನೆ, ಬೆಂಗಳೂರಿಗೆ ಮೆಟ್ರೊ, ವಿಕಸಿತ ಭಾರತ ಇವೆಲ್ಲಾ ಕೇಂದ್ರ ಸರ್ಕಾರದ ಕೊಡುಗೆಗಳು. ಬಿಜೆಪಿ.ಗೆ ದೇಶ ಮೊದಲು. ಬ್ರಿಟೀಷ್‌ನವರು ಜನ್ಮ ಕೊಟ್ಟಿರುವ ಕಾಂಗ್ರೆಸ್ ಪಕ್ಷದಿಂದ ಜನ ಏನನ್ನು ನಿರೀಕ್ಷಿಸುವಂತಿಲ್ಲ. ಹೊರ ದೇಶದವರು ಪ್ರಶಂಶಿಸುವಷ್ಟರ ಮಟ್ಟಿಗೆ ಭಾರತ ಬೆಳೆಯುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರಾಂದಾಸ್, ನಿಕಟಪೂರ್ವ ಅಧ್ಯಕ್ಷ ಎ.ಮುರಳಿ, ಲೋಕೇಶ್, ನಾಗರಾಜ್, ವಕ್ತಾರ ನಾಗರಾಜ್ ಬೇದ್ರೆ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.