ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾನೂನಿನ ಅರಿವು ಮಹಿಳೆಯರಿಗೆ ಇದ್ದರೆ ತಮಗಾದ ಅನ್ಯಾಯವನ್ನು ಎದುರಿಸಿ, ನ್ಯಾಯ ಪಡೆಯುವ ಅವಕಾಶ ಮಹಿಳೆಯರಿಗೆ ಇರುತ್ತದೆ ಎಂದು ವಕೀಲರಾದ ರಾಧಾ ಮುರುಳೀಧರ್ ಹೇಳಿದರು.
ನಗರದ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಸಭಾ ಭವನದಲ್ಲಿ ಶ್ರೀ ಕಾಶಿ ವಿಶಾಲಾಕ್ಷಿ ವಿಪ್ರ ವನಿತಾ ವೇದಿಕೆಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು ಕಾನೂನು ವೃತ್ತಿಯಲ್ಲಿ ಮಹಿಳೆಯರು ಅಷ್ಟೊಂದು ತೊಡಿಸಿಕೊಳ್ಳದಿದ್ದರೂ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕಾನೂನು ತಿಳಿದ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಸಂತಸದ ಸಂಗತಿ. ಏಕೆಂದರೆ ಕಾನೂನು ತಿಳಿದುಕೊಂಡಾಗ ಸಮಾಜದಲ್ಲಿ ಪ್ರಬಲವಾಗಿ ಹೋರಾಟ ಮಾಡಲು ಸಾಧ್ಯವಾಗುತ್ತದೆ.
ಆ ನಿಟ್ಟಿನಲ್ಲಿ ನಾವು ಮಹಿಳೆಯರಿ ಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಬೇಕಾಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕಿದೆ ಎಂದರು.
ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮೀ ಮಾತನಾಡಿ, ಸಮಾಜದಲ್ಲಿ ಕೌಟುಂಬಿಕ ಕಲಹದಲ್ಲಿ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಿರುವುದು ಮಹಿಳೆಯರೇ ಹೆಚ್ಚಾಗುತ್ತಿರುವುದು ವಿಷಾದಕರ. ಆದ್ದರಿಂದ ನಾವು ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ರಂಗದಲ್ಲೂ ಮುನ್ನೆಲೆಗೆ ಬರುವಂತ ಯೋಜನೆ ರೂಪಿಸಬೇಕಾಗಿದೆ.
ನಮ್ಮ ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬ ಮಹಿಳೆ ಪುರುಷರಿಗೂ ಸಮಾನವಾದ ಕಾನೂನಿದ್ದರೂ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಮಹಿಳೆಯರೇ ಎಂದು ಹೇಳಬಹುದು. ಆ ನಿಟ್ಟಿನಲ್ಲಿ ನಾವೆಲ್ಲರೂ ಸಮಾಜಮುಖಿ ಕೆಲಸದಲ್ಲಿ ಅವರಿಗೆ ಅವಕಾಶ ನೀಡಿ ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವೇದಿಕೆಯ ಅದ್ಯಕ್ಷೆ ರೂಪ ರಘುನಾಥ , ಮಹಿಳಾ ಸಮಾಜದ ಅದ್ಯಕ್ಷೆ ವತ್ಸಲ ಜಗನಾಥ್, ನಗರಸಭಾ ಸದಸ್ಯೆ ಇಂದ್ರಾಣಿ, ಶ್ರೀ ಕಾಶಿ ವಿಶಾಲಾಕ್ಷಿ ವಿಪ್ರ ವನಿತಾ ವೇದಿಕೆಯ ಉಪಾಧ್ಯಕ್ಷೆ ಲಕ್ಷ್ಮಿ ವೇಣುಗೋಪಾಲ್, ಕಾರ್ಯದರ್ಶಿ ಗಾಯತ್ರಿ ಪ್ರಸಾದ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.

