ಕಾನೂನು, ಸಂವಿಧಾನವೇ ನಮ್ಮ ಧರ್ಮ ಗ್ರಂಥ- ವಕೀಲ ತಿಪ್ಪೇರುದ್ರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಸಮಾಜ ಪರಿವರ್ತನಾ ವೇದಿಕೆ ಹಾಗೂ ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ವತಿಯಿಂದ ತಮ್ಮೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ವಕೀಲ ಪಿ. ಎಚ್. ತಿಪ್ಪೇರುದ್ರಪ್ಪ ಮಾತನಾಡಿದರು.

ಭಾರತ ದೇಶವು, ಬಹು ವೈವಿಧ್ಯತೆ, ಬಹು ಸಂಸ್ಕೃತಿ ಒಳಗೊಂಡಿರುವ ದೇಶ, ವಿವಿಧತೆಯಲ್ಲಿ ಏಕತೆ ಮೈಗೂಡಿಸಿಕೊಂಡಿರುವ ದೇಶವಾಗಿದೆ. ಬುದ್ಧನ ಕರುಣೆ, ಪ್ರೀತಿ ಮೈತ್ರಿ, ಮಮತೆ, ಬಸವಣ್ಣನ ಕಾಯಕ ತತ್ವ, ಸಮಾನತೆಯ ತತ್ವ, ಇವುಗಳ ಐಕ್ಯವೇ ಭಾರತ ದೇಶದ ಸಂವಿಧಾನವಾಗಿದೆ ಎಂದು ಅವರು ತಿಳಿಸಿದರು.
ಭಾರತ ದೇಶದ ಸಂವಿಧಾನವು ಬುದ್ಧ ಬಸವಣ್ಣ ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲಾದ ಸಮಾಜದ ಪರಿವರ್ತನೆಗೆ
, ದುಡಿದ ಪರಿವರ್ತನಕಾರರ ಒಟ್ಟು ಆಶಯವಾಗಿದೆ. ಇವರೆಲ್ಲರ ಫಲವೇ ಈ ದೇಶದ ಸಂವಿಧಾನ ಮತ್ತು ಕಾನೂನಾಗಿದೆ ಎಂದರು.

- Advertisement - 

 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಮಹಿಳೆಯರಿಗೆ ವಿಶೇಷವಾಗಿಕಾನೂನುಗಳನ್ನು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ, ಮಹಿಳಾ ಪ್ರಾತಿನಿಧ್ಯ ಮತ್ತು ರಾಜಕೀಯ ಸಮಾನತೆ ಹಾಗೂ ಅವರನ್ನು ಮೇಲೆತ್ತುವ ದೂರ ದೃಷ್ಟಿ ಹೊಂದಿದ್ದರು. ಇಂದು ನಾವೆಲ್ಲ ಭಾರತೀಯರು ಘನತೆ ಗೌರವ ನೆಮ್ಮದಿಯ ಬದುಕನ್ನ ಹೊಂದಿದ್ದೇವೆ ಎಂದರೆ ಅದು ಈ ದೇಶದ ಸಂವಿಧಾನದಿಂದ ಸಾಧ್ಯವಾಗಿದೆ ವಕೀಲ ತಿಪ್ಪೇರುದ್ರಪ್ಪ ಹೇಳಿದರು.

ಗೌತಮ ಬುದ್ಧ, ಬಸವಣ್ಣ, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣ ಗುರು, ಶಾಹೂ ಮಹಾರಾಜ್, ಮೊದಲಾದ ದಾರ್ಷನಿಕರು, ಸಮಾಜದಲ್ಲಿ ತಾಂಡವಳುತ್ತಿದ್ದ ಅಸಮಾನತೆ ಅನ್ಯಾಯ ದೌರ್ಜನ್ಯ ದಬ್ಬಾಳಿಕೆ ಇವೆಲ್ಲದರ ವಿರುದ್ಧ ಹೋರಾಟ ಮಾಡಿ ನಮ್ಮ ಸಂವಿಧಾನಕ್ಕೆ ಮಾದರಿಯೊಂದಿಗೆ  ಪ್ರೇರಣೆಯಾಗಿದ್ದಾರೆ ಎಂದು ಅವರು ತಿಳಿಸಿದರು.

- Advertisement - 

ಮುಖ್ಯ ಶಿಕ್ಷಕ ಶಿವಕುಮಾರ್ ಮಾತನಾಡಿ ಮಕ್ಕಳು ಕಾನೂನುಗಳನ್ನು ಗೌರವಿಸಬೇಕು, ಕಾನೂನುಗಳನ್ನು ನಾವು ರಕ್ಷಿಸಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ. ಕಾನೂನುಗಳೇ ನಮ್ಮೆಲ್ಲರ ಜೀವಾಳವಾಗಿವೆ. ಚೆನ್ನಾಗಿ ಓದಿ ತಂದೆ ತಾಯಿಯರಿಗೆ, ಶಿಕ್ಷಕರಿಗೆ ಒಳ್ಳೆಯ ಕೀರ್ತಿ, ಗೌರವ ತರಬೇಕು, ಆಗ ಸಮಾಜ ನಮ್ಮನ್ನು ಗೌರವದಿಂದ ನೋಡುತ್ತದೆ. ಪೋಷಕರು ಶ್ರಮಪಟ್ಟು ನಮ್ಮನ್ನು ಓದಿಸುತ್ತಿದ್ದಾರೆ ಹಾಗಾಗಿ ಅವರ ಬೆವರು, ಮತ್ತು ರಕ್ತಕ್ಕೆ ಮೋಸ ಮಾಡದೇ ಚೆನ್ನಾಗಿ ಓದಬೇಕು ಎಂದು ಸಲಹೆ ನೀಡಿದರು.

ಸಮಾಜ ಪರಿವರ್ತನಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮರಿಸ್ವಾಮಿ ನಾಗಸಮುದ್ರ ಮಾತನಾಡಿ, ಮರಳಿ ಸಮಾಜಕ್ಕೆ ಕೊಡಿ, ಎನ್ನುವ ಸಂದೇಶದ ಸಾಕ್ಷಾತ್ಕಾರಕ್ಕಾಗಿ ಪ್ರತಿ ಶಾಲೆ, ಕಾಲೇಜುಗಳಲ್ಲಿ ನಾವು ಜಾಗೃತಿ ಮೂಡಿಸುವ ಮಹತ್ತರ ಕಾರ್ಯ ಮಾಡುತ್ತಿದ್ದೇವೆ.

ನಮ್ಮ ಈ ಕಾರ್ಯಕ್ರಮಗಳು ಸತತ ಎರಡು ವರ್ಷಗಳಿಂದ ಮೊಳಕಾಲ್ಮೂರು ತಾಲೂಕುನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮೆಲ್ಲರ ಸಲಹೆ ಸಹಕಾರ ಪ್ರೋತ್ಸಾಹ ಮಾರ್ಗದರ್ಶನ ಹೀಗೆ ಇರಬೇಕು. ಸಮಾಜದ ಪರಿವರ್ತನೆಗೆ ದುಡಿಯಬೇಕಾಗಿರುವುದು ನಮ್ಮೆಲ್ಲರ ಮೂಲಭೂತ ಜವಾಬ್ದಾರಿ ಈ ನಿಟ್ಟಿನಲ್ಲಿ ನಾವೆಲ್ಲರೂ ಆ ಕಾರ್ಯವನ್ನು ಶ್ರದ್ಧಾ ವಹಿಸಿ ಮಾಡೋಣ ಎನ್ನುವ ಸಲಹೆ ನೀಡಿದರು..

ಪರಿವರ್ತನಾ ವೇದಿಕೆ ಗೌರವ ಅಧ್ಯಕ್ಷ ಭಂಗಿ ನಾಗರಾಜ್, ಜಿಲ್ಲಾ ಅಧ್ಯಕ್ಷ ಎಂ. ರುದ್ರಯ್ಯ, ಪೊಲೀಸ್ ಇಲಾಖೆ ತಿಮ್ಮಣ್ಣ, ಎಸ್. ಪರಮೇಶ್, ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ಶಿವಕುಮಾರ್, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಶಾಲಾ ಸಿಬ್ಬಂದಿ, ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.

 

Share This Article
error: Content is protected !!
";