ಪ್ರಜಾಪ್ರಭುತ್ವದ ಗೌರವ, ಘನತೆ ಹೆಚ್ಚಿಸಿದೆ:ಶಾಸಕ ರಘುಮೂರ್ತಿ
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ಸಂರಕ್ಷಣೆ ಹಾಗೂ ಪ್ರಜಾಪ್ರಭುತ್ವ ಶಾಶ್ವತವಾಗಿ ಎಲ್ಲರೂ ಸದಾಕಾಲ ನೆನಪಿಸಿಕೊಳ್ಳುವಂತಹ ಐತಿಹಾಸಿಕ ಕಾರ್ಯಕ್ರಮವನ್ನು ಮಾಡುವ ಮೂಲಕ ಪ್ರಜಾಪ್ರಭುತ್ವ ಸಂರಕ್ಷಣೆಗೆ ನಾವೆಲ್ಲರೂ ಬದ್ದರಾಗಬೇಕೆಂಬ ಸಂಕಲ್ಪ ಮಾಡಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-೨೦೨೪ ಪ್ರಜಾಪ್ರಭುತ್ವಕ್ಕಾಗಿ ಮಾನವ ಸರಪಳಿ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಉತ್ತಮವಾಗಿ ನಡೆದಿದೆ. ನಾವೆಲ್ಲರೂ ಪ್ರಜಾಪ್ರಭುತ್ವದ ಸಂರಕ್ಷಣೆಗೆ ಬದ್ದರಾಗೋಣವೆಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ನಗರ ನೆಹರೂ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಡಾ.ಬಿ..ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಈ ಕಾರ್ಯಕ್ರಮ ಜನಸಾಮಾನ್ಯರ ಕಾರ್ಯಕ್ರಮವಾಗಿ ಇಂದು ರೂಪುಗೊಂಡಿದೆ. ನಿರೀಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯ ಜನರು ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಣೆಯಿಂದ ಆಗಮಿಸಿದ್ಧಾರೆ. ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಯಶಸ್ಸುಕಂಡಿದೆ. ಬೀದರ್ನಿಂದ ಚಾಮರಾಜನಗರದ ವರೆಗೂ ಒಂದೇ ಹಂತದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು ೨೫೦೦ ಕಿ.ಮೀ ದೂರ ಮಾನವ ಸರಪಳಿ ಮೂಲಕ ಗುರಿಯನ್ನು ಸಾಧಿಸಲಾಗಿದೆ ಎಂದರು.
ಬ್ರಿಟೀಷರ ದಾಸ್ಯದಿಂದ ನಮ್ಮನ್ನು ಮುಕ್ತ ಮಾಡಿದ ಕೀರ್ತಿ ಮಹಾತ್ಮಗಾಂಧಿಜಿಯವರದ್ದು. ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆದ ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ನಮ್ಮ ರಾಷ್ಟ್ರದ ಆಡಳಿತವನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಯಿತು. ಸಂವಿಧಾನ ರಕ್ಷಣೆಯಿಂದ ಮಾತ್ರ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬಹುದು. ಪ್ರಜಾಪ್ರಭುತ್ವದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಸರ್ಕಾರದ ಪರವಾಗಿ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿ.ಆನಂದ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಆಡಳಿತ ಸುಮಾರು ಎಟ್ಹಂತ್ತು ದಿನಗಳಿಂದ ಇದರ ಯಶಸ್ಸಿಗೆ ಶ್ರಮಿಸಿದೆ. ತಾಲ್ಲೂಕಿನ ಒಟ್ಟು ೪೭ ಕಿ.ಮೀ ವ್ಯಾಪ್ತಿಯನ್ನು ಸುಮಾರು ೪೦ ಸಾವಿರ ಜನರು ಸೇರಿ ಯಶಸ್ವಿಗೊಳಿಸಿದ್ಧಾರೆ. ಇಲಾಖೆಗಳ ಸಹಯೋಗದೊಂದಿಗೆ ಸಂಘ,ಸಂಸ್ಥೆಗಳ ಪ್ರತಿನಿಧಿಗಳು ಸಹ ಕೈಜೋಡಿಸಿದ್ಧಾರೆ ಎಂದರು.
ಚಳ್ಳಕೆರೆ ತಾಲ್ಲೂಕಿನ ಗಡಿಭಾಗವಾದ ತಳಕು ಠಾಣಾ ವ್ಯಾಪ್ತಿಯ ಬುಕ್ಲೂರಹಳ್ಳಿ ಗೇಟ್ನಿಂದ ಹೆಗ್ಗೆರೆ ಗಡಿಯತನಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತಳಕು ವ್ಯಾಪ್ತಿಯ ತಳಕು, ಹೊಸಹಳ್ಳಿ, ಬುಡ್ನಹಟ್ಟಿ ಹೊಟ್ಟೆಪ್ಪನಹಳ್ಳಿ, ಸಾಣಿಕೆರೆ ಬಳಿ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಗರದ ಪ್ರದೇಶದಲ್ಲಿ ನೆಹರೂ ವೃತ್ತದಲ್ಲಿ ಜನರು ಕಾಣಿಸಿಕೊಂಡರೆ ವೀರಶೈವ ಕಲ್ಯಾಣಮಂಟಪದಿಂದ ಮಾರ್ಕೆಟ್ ಆವರಣದರೆಗೂ ಜನಸಂಖ್ಯೆ ಇರಲಿಲ್ಲ. ಬಸವೇಶ್ವರ ವೃತ್ತದಲ್ಲಿ ಬೆಸ್ಕಾಂ ಇಲಾಖೆ ಸಿಬ್ಬಂದಿ ಇದ್ದರು. ಗಿರಿಯಮ್ಮನಹಳ್ಳಿ, ತಳಕು ಭಾಗದಲ್ಲಿ ಶಾಲಾ ಮಕ್ಕಳು, ಮಹಿಳಾ ಸಂಘಟನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡರು.
ಕಾರ್ಯಕ್ರಮದಲ್ಲಿ ತಹಶೀಲ್ಧಾರ್ ರೇಹಾನ್ಪಾಷ, ಇಒ ಶಶಿಧರ, ಡಿವೈಎಸ್ಪಿ ರಾಜಣ್ಣ, ಇನ್ಸ್ಪೆಕ್ಟರ್ ಆರ್.ಎಫ್.ದೇಸಾಯಿ, ಹನುಮಂತಶಿರೇಹಳ್ಳಿ, ಬಿಇಒ ಕೆ.ಎಸ್.ಸುರೇಶ್, ಪೌರಾಯುಕ್ತ ಜಗರೆಡ್ಡಿ, ವಲಯ ಅರಣ್ಯಾಧಿಕಾರಿ ಎಸ್.ಸುರೇಶ್, ಸಮಾಜಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ರಮೇಶ್ಗೌಡ, ವೆಂಕಟೇಶ್, ಸುಮಾಭರಮಣ್ಣ, ನಾಮಿನಿ ಸದಸ್ಯರಾದ ಬಡಿಗಿಪಾಪಣ್ಣ, ವೀರಭದ್ರಿ, ನೇತಾಜಿಪ್ರಸನ್ನ, ಅನ್ವರ್ಮಾಸ್ಟರ್, ಒ.ರಂಗಸ್ವಾಮಿ, ಸಿ.ವೀರಭದ್ರಬಾಬು, ಶಶಿಧರ ಮುಂತಾದವರು ಭಾಗವಹಿಸಿದ್ದರು.