ಚಂದ್ರವಳ್ಳಿ ನ್ಯೂಸ್, ಗುಡೇಕೋಟೆ:
ರೈತರು ತಮ್ಮ ಕಣದಲ್ಲಿ ಕಟ್ಟಿ ಹಾಕಿದ್ದ ಆಕಳು ಮತ್ತು ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ತಿಂದಿರುವ ಘಟನೆ ಕೂಡ್ಲಿಗಿ ತಾಲೂಕು ಸಿಡೇಗಲ್ ನಲ್ಲಿ ಸೋಮವಾರ ನಡೆದಿದೆ.
ಸಿಡೇಗಲ್ಲು ಗ್ರಾಮದ ನಿವಾಸಿ ಕೃಷ್ಣಪ್ಪ ತಂದೆ ಅಂಗಡಿ ರಾಮಚಂದ್ರಪ್ಪ ಎನ್ನುವವರು ತಮ್ಮ ಕಣದಲ್ಲಿ ಆಕಳನ್ನು ಕಟ್ಟಿಹಾಕಿ ಮನೆಗೆ ಹೋದ ಬಳಿಕ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಗ್ರಾಮದ ಜನತೆ ಭಯಭೀತರಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅನೇಕ ಹಸು ಹೋರಿ, ಕರುಗಳು, ಆಡು, ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಎಳೆದಾಡಿ ಕೊಂದು ಹೋಗುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಇದರಿಂದ ಗುಡೇಕೋಟೆ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಭಯವಿತರಾಗಿದ್ದಾರೆ.
ಪಕ್ಕದ ಅರಣ್ಯಕ್ಕೆ ಹೋಗುವ ಕುರಿ ಧನಗಾಯಿಗಳು ಭಯದಿಂದಲೇ ಹೋಗಿ ಬರುತ್ತಿದ್ದಾರೆ. ಹೀಗಾಗಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿದು ಮೂಕ ಪ್ರಾಣಿಗಳ ಜೀವ ಉಳಿಸುವಂತೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಂಚಾಲಕ ಹೆಚ್.ಹೊನ್ನೂರು ಸ್ವಾಮಿ ಒತ್ತಾಯಿಸಿದ್ದಾರೆ.
ಕೂಡ್ಲಿಗಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.