ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಕಾರೇಪುರ ಗ್ರಾಮದ ತೋಟದ ಮನೆ ಮುಂದೆ ಶೆಡ್ ನಲ್ಲಿದ್ದ ಹಸು ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದು ಹಸುವನ್ನು ಅರೆಬರೆ ತಿಂದು ಹೊತ್ತೊಯ್ಯಲು ಪ್ರಯತ್ನಿಸಿ ಪರಾರಿಯಾಗಿದೆ. ಈ ಘಟನೆ ತಡ ರಾತ್ರಿ ನಡೆದಿದೆ.
ರೈತ ರಾಮಸ್ವಾಮಿ ಎಂಬುವವರು ತೋಟದ ಮನೆ ಮುಂದೆ ಶೆಡ್ ನಲ್ಲಿ ಹಸುಕಟ್ಟಿ ಮಲಗಿದ್ದರು. ಏಕಾಏಕಿ ಹಸು ಮೇಲೆ ದಾಳಿ ಮಾಡಿರುವ ಚಿರತೆ ಸುಮಾರು ನೂರು ಮೀಟರ್‌ನಷ್ಟು ಹಸುವನ್ನು ಎಳೆದೊಯ್ದಿದೆ. ಕೂಡಲೆ ಶಬ್ದ ಕೇಳಿ ಮನೆಯಿಂದ ರೈತರು ಹೊರಬಂದ ಹಿನ್ನೆಲೆ ಚಿರತೆ ಪರಾರಿಯಾಗಿದೆ.
ರೈತ ರಾಮಸ್ವಾಮಿ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಸುಮಾರು ಐವತ್ತು ಸಾವಿರ ರೂಪಾಯಿ ಬೆಲೆ ಬಾಳುವ ಹಸು ಸಾವನ್ನಪ್ಪಿದೆ.
ಚಿರತೆ ಆತಂಕ ಹಿನ್ನೆಲೆ ಗ್ರಾಮಸ್ಥರು ಮಕ್ಕಳು ರಾತ್ರಿ ವೇಳೆ ಸಂಚರಿಸಲು ಭಯ ಬೀತರಾಗಿದ್ದಾರೆ. ಈ ಹಿಂದೆ ಕರುವೊಂದನ್ನು ಚಿರತೆ ಹೊತ್ತೊಯ್ದಿದೆ ಎಂದು ರೈತ ರಾಮಸ್ವಾಮಿ ಅಳಲುತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಅಳವಡಿಸಿ ಚಿರತೆ ಸೆರೆ ಹಿಡಿಯಬೇಕು ಎಂದು ಸುತ್ತ ಮುತ್ತಲಿನ ಗ್ರಾಮಸ್ಥರಿಂದ ಒತ್ತಾಯಿಸಿದ್ದಾರೆ.

