ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯ ಸರ್ಕಾರಕ್ಕೆ ಶೋಷಿತ ಅಸ್ಪೃಶ್ಯ ಸಮುದಾಯಗಳ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಕೂಡಲೇ ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರೆ ಸಂಪುಟದ ಸಹದ್ಯೋಗಿಗಳನ್ನು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಠ ಜಾತಿಗಳ ಒಕ್ಕೂಟದ ಚಿತ್ರದುರ್ಗ ಜಿಲ್ಲಾ ಸಮಿತಿ ಸದಸ್ಯ ಬಿ.ಪಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.
ಸೆ.೧೭ರಂದು ಕಲುಬುರ್ಗಿಯಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿ ಮಾಡುವ ತೀರ್ಮಾನ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಠ ಜಾತಿಗಳ ಒಕ್ಕೂಟದಿಂದ ಸೆ.೧೬ರಂದು ಸಂಜೆ ೪ ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಧರಣಿ ಸತ್ಯಾಗ್ರಹದಲ್ಲಿ ದೇವನೂರು ಮಹದೇವ, ಜಸ್ಟೀಸ್ ಗೋಪಾಲ ಗೌಡ, ಡಾ.ಬರಗೂರು ರಾಮಚಂದ್ರಪ್ಪ, ಪ್ರೊ.ರವಿಕುಮಾರ್, ಸಿ.ಎಸ್.ದ್ವಾರಕನಾಥ್, ಬಂಜೆಗೆರೆ ಜಯಪ್ರಕಾಶ್, ಎಸ್.ಜಿ.ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಳ್, ಎಸ್.ಆರ್.ಹೀರೇಮಠ್, ಪ್ರೋ.ಜಾಫೆಟ್, ಗೋನಾಳ ಭೀಮಪ್ಪ, ಮಾವಳ್ಳಿ ಶಂಕರ್, ಇಂದೂದರ್ ಹೊನ್ನಾಪುರ, ಹಿರಿಯ ಪತ್ರಕರ್ತ ಡಿ.ಉಮಾಪತಿ, ಬಿ.ಪಿ.ಪ್ರಕಾಶ್ ಮೂರ್ತಿ, ಮುಂತಾದ ನಾಯಕರು ಭಾಗವಹಿಸುತ್ತಿದ್ದಾರೆ.
ಇದಕ್ಕೆ ಪೂರಕ ವಾತಾವರಣವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಸಾಮಾಜಿಕ ನ್ಯಾಯಕ್ಕೆ ಬದ್ದರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಮೂಂದೂಡಿದಷ್ಟು ದಲಿತರ ಅನೈಕತೆಗೆ ತಾವೇ ಕಾರಣರಾಗುತ್ತೀರಾ? ಎಂದರು.
ಪ್ರಬುದ್ದ ಸಮಾಜದ ನಿರ್ಮಾಣದ ಕನಸುಳ್ಳ ಎಲ್ಲಾ ಜನವರ್ಗ ಹಾಗೂ ಅಂಬೇಡ್ಕರ್ ಅನುಯಾಯಿಗಳು ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ಆಳುವ ಸರಕಾರಕ್ಕೆ ನೈತಿಕ ಒತ್ತಡ ಹೇರಬೇಕೆಂದು ಮನವಿ ಮಾಡಿದ್ದಾರೆ.