ಬಿಜೆಪಿ ಕೊಟ್ಟ ಭರವಸೆಯಂತೆ 5300 ಕೋಟಿ ನೀಡಲಿ, ವಚನಭ್ರಷ್ಟ ಆಗುವುದು ಬೇಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ 5300 ಕೋಟಿ ರೂ.ಗಳನ್ನು ತಕ್ಷಣವೆ ಬಿಡುಗಡೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ 28 ಸಂಸದರು ಪಕ್ಷಾತೀತವಾಗಿ ಕೇಂದ್ರಕ್ಕೆ ನಿಯೋಗ ಹೋಗಿ 5300 ರೂ.ಗಳ ಬಿಡುಗಡೆಗೆ ಒತ್ತಡ ಹೇರಬೇಕು. ರಾಜ್ಯದ ಜನ ನಾಲ್ಕುವರೆ ಲಕ್ಷ ಕೋಟಿ ರೂ.ಗಳ ತೆರಿಗೆ ಕಟ್ಟುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ವಿಳಂಬ ಮಾಡದೆ ಹಣ ಬಿಡುಗಡೆಗೆ ಮುಂದಾಗಬೇಕೆಂದರು.
ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದ್ದರೆ, ವಚನ ಭ್ರಷ್ಟರಾಗದೆ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಸುಧಾಕರ್ ತಾಕೀತು ಮಾಡಿದರು.

ಗುರುವಾರ ಮಧ್ಯಾಹ್ನ ೨ ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿರಿಯೂರಿಗೆ ಆಗಮಿಸಿ ವಾಣಿವಿಲಾಸಸಾಗರಕ್ಕೆ ಬಾಗಿನ ಅರ್ಪಿಸುವರು. ೧18 ವರ್ಷಗಳ ಇತಿಹಾಸದಲ್ಲಿ ವಿ.ವಿ.ಸಾಗರ ಮೂರನೆ ಬಾರಿಗೆ ಕೋಡಿ ಬಿದ್ದಿದೆ. ಚಿತ್ರದುರ್ಗ ಬ್ರಾಂಚ್ ಕೆನಾಲ್ ಅಡೆತಡೆ ನಿವಾರಣೆಯಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಲು ವಿಶ್ವೇಶ್ವರಯ್ಯ ಜಲ ನಿಗಮ ಗುರಿಯಿಟ್ಟುಕೊಂಡಿದೆ.

ಅದೇ ರೀತಿ ತುಮಕೂರು ಬ್ರಾಂಚ್ ಕೆನಾಲ್ ಒಂದಿಷ್ಟು ಸಮಸ್ಯೆ ಇದ್ದು ಆ ಸಮಸ್ಯೆ ಬೇಗ ನಿವಾರಣೆ ಮಾಡಿ ಆ ಕೆಲಸವನ್ನು ಮಾಡಲಾಗುತ್ತದೆ. ವಿಧಾನಸಭೆ ಚುನಾವಣಾ ಪೂರ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಉಚಿತ ಐದು ಗ್ಯಾರೆಂಟಿಗಳನ್ನು ಕೊಟ್ಟು ನುಡಿದಂತೆ ನಡೆದಿದ್ದಾರೆಂದರು.

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಮಧ್ಯ ಕರ್ನಾಟಕ ಬಯಲುಸೀಮೆ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿ ಯಾವುದೇ ನೀರಾವರಿ, ಕೈಗಾರಿಕೆಗಳ ಸೌಲಭ್ಯಗಳಿಲ್ಲ. ಅಪ್ಪರ್ ಭದ್ರಾ ಯೋಜನೆಗಾಗಿ ಕಾಲುವೆ ತೋಡಲಾಗುತ್ತಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಜಿಲ್ಲೆಗೆ ನೀರು ಹರಿಯಲು ಸಹಕರಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷ ಉಚಿತ ಐದು ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದೆ. ಬಡವರು, ದುರ್ಬಲರು, ಅಸಹಾಯಕರು ಜೀವಿಸುತ್ತಿರುವ ಜಿಲ್ಲೆಯ ಬಗ್ಗೆ ಬಿಜೆಪಿಯವರಿಗೆ ಕಾಳಜಿಯಿಲ್ಲ. ಸಮಯ ಬಂದರೆ ಕೇಂದ್ರ ಸರ್ಕಾರದ ವಿರುದ್ದ ಹೋರಾಟ, ಚಳುವಳಿ ನಡೆಸಬೇಕಾಗುತ್ತದೆಂದು ಹೆಚ್.ಆಂಜನೇಯ ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷರು, ಮಾಜಿ ಜಿಪಂ ಅಧ್ಯಕ್ಷ ಆರ್.ಶಿವಕುಮಾರ್, ಅಂಜಿನಪ್ಪ, ಮುದಸಿರ್ ನವಾಜ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರ್ಪಿತ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";