ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದೇಶಾಭಿಮಾನ, ದೇಶಭಕ್ತಿಯನ್ನು ಇಂದಿನ ಮಕ್ಕಳು ಬೆಳೆಸಿಕೊಳ್ಳಬೇಕೆಂದು ಗುಲ್ಬರ್ಗದ ಸಿದ್ದಬಸವ ಸ್ವಾಮೀಜಿ ಕರೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ಮುರುಘಾಮಠದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವೀರವನಿತೆ ಒನಕೆ ಓಬವ್ವ ಪ್ರಾಣವನ್ನು ಲೆಕ್ಕಿಸದೆ ಒನಕೆಯಿಂದ ಶತ್ರುಗಳನ್ನು ಸದೆ ಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದಳು. ಅಂತಹ ಕೆಚ್ಚದೆ ಛಲ ಬಿಚ್ಚುಗತ್ತಿ ಭರಮಣ್ಣನಾಯಕನಲ್ಲಿದ್ದ ಶೌರ್ಯ ನಿಮ್ಮಲ್ಲಿ ಮೂಡಬೇಕು. ರಾಜಮಹಾರಾಜರು, ಪಾಳೆಯಗಾರರು ಆಳಿದ ಚಿತ್ರದುರ್ಗಕ್ಕೆ ತನ್ನದೆ ಆದ ಇತಿಹಾಸವಿದೆ. ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿಯಾದುದು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ನೀವುಗಳು ಇಲ್ಲಿನ ಇತಿಹಾಸ ತಿಳಿದುಕೊಳ್ಳಬೇಕೆಂದು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಶಿಸ್ತು, ಆತ್ಮಬಲವನ್ನು ಬೆಳೆಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮುಖ್ಯ ಆಯುಕ್ತ ಕೆ.ರವಿಶಂಕರ್‌ರೆಡ್ಡಿ ಮಾತನಾಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ದೇಶ ಕಟ್ಟುವ ನಾಯಕತ್ವ ಬೆಳೆಯುತ್ತದೆ.
ಭಾರತದ ಭವ್ಯ ಭವಿಷ್ಯ ಯುವ ಜನಾಂಗದ ಮೇಲೆ ನಿಂತಿದೆ. ಶಿಕ್ಷಣದ ಜೊತೆ ಇಂತಹ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವುದರಿಂದ ಬದುಕುವ ಕೌಶಲ್ಯ ಕಲಿಯಬಹುದು. ಇಂದಿನ ಮಕ್ಕಳಲ್ಲಿ ಮೌಲ್ಯ, ಸಿದ್ದಾಂತಗಳು ಮಾಯವಾಗುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣ, ಮೊಬೈಲ್‌ಗಳ ಗೀಳಿನಿಂದ ಯುವ ಪೀಳಿಗೆ ಹೊರ ಬರಬೇಕಿದೆ. ಮೊಬೈಲನ್ನು ಒಳ್ಳೆಯದಕ್ಕಷ್ಟೆ ಬಳಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಿರಿ. ವಯಸ್ಸಾದ ತಂದೆ-ತಾಯಿಗಳನ್ನು ವೃದ್ದಾಶ್ರಮಕ್ಕೆ ಸೇರಿಸುವ ಪದ್ದತಿ ಒಳ್ಳಯದಲ್ಲ. ಜೀವನದಲ್ಲಿ ಏನಾದರೂ ಸ್ಪಷ್ಟ ಗುರಿಯಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಪಠ್ಯಪುಸ್ತಕದ ಜೊತೆ ಕೌಶಲ್ಯ ಶಿಕ್ಷಣವನ್ನು ಕಲಿತಾಗ ಸ್ವಾವಲಂಭಿಗಳಾಗಿ ಬದುಕಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಗುರುಮಠಕಲ್‌ನ ಶಾಂತವೀರಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಏಳುಸುತ್ತಿನ ಕಲ್ಲಿನಕೋಟೆಯಿರುವ ಚಿತ್ರದುರ್ಗ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿದೆ. ಮುರುಘಾಮಠಕ್ಕೆ ಮುನ್ನೂರು ನಾಲ್ಕು ನೂರು ವರ್ಷಗಳ ರಾಜಪರಂಪರೆಯ ಇತಿಹಾಸವಿದೆ. ಐತಿಹಾಸಿಕ, ಚಾರಿತ್ರಿಕ, ಧಾರ್ಮಿಕ ಸ್ಥಳಗಳಿಗೆ ಜಿಲ್ಲೆ ಹೆಸರುವಾಸಿ. ಮೂರು ದಿನಗಳ ಕಾಲ ತರಬೇತಿ ಪಡೆಯುವ ನೀವುಗಳನ್ನು ಇಲ್ಲಿನ ಇತಿಹಾಸವನ್ನು ತಿಳಿದುಕೊಳ್ಳಿ ಎಂದರು.
ಶಿಸ್ತು ಮತ್ತು ಸಮಯ ಪಾಲನೆಗೆ ಹೆಸರುವಾಸಿಯಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸೇರುವುದು ಒಂದು ಸುವರ್ಣಾವಕಾಶ. ಉತ್ತಮ ನಾಗರೀಕರಾಗಿ ಸಮಾಜದಲ್ಲಿ ಹೊರ ಹೊಮ್ಮಬೇಕಾದರೆ ಇಂತಹ ಸಂಸ್ಥೆಗಳಲ್ಲಿ ಮೊದಲು ಸೇವೆ ಸಲ್ಲಿಸಬೇಕು. ಸಮಯ ಅತ್ಯಂತ ಅಮೂಲ್ಯವಾದುದು. ಯಾರನ್ನು ಕಾಯುವುದಿಲ್ಲ. ಹಾಗಾಗಿ ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಿ ಎಂದು ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಗೆ ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಜಿ.ಎಸ್.ಉಜ್ಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಜಿಲ್ಲಾ ಸ್ಥಾನಿಕ ಆಯುಕ್ತರುಗಳಾದ ಎಂ.ಕೆ.ಅನಂತರೆಡ್ಡಿ, ಪಿ.ವೈ.ದೇವರಾಜ್‌ಪ್ರಸಾದ್, ರೋವರ್‍ಸ್ ಶಿಬಿರದ ನಾಯಕ ಟಿ.ಎಸ್.ಶಿವಣ್ಣ, ರೇಂಜರ್‍ಸ್ ಶಿಬಿರದ ನಾಯಕಿ ಅಶ್ವಿನಿ ಆರ್.ಎಲ್. ರೇಂಜರ್‍ಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ಕೆ.ಲೀಲಾವತಿ, ರೋವರ್‍ಸ್ ಜಿಲ್ಲಾ ನೋಡಲ್ ಅಧಿಕಾರಿ ಹೆಚ್.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ರಹಮತ್‌ವುಲ್ಲಾ, ಜಿಲ್ಲಾ ಸಂಘಟಕರುಗಳಾದ ಕೆ.ಟಿ.ಮಲ್ಲೇಶಪ್ಪ, ಸಿ.ರವಿ ಇವರುಗಳು ಶಿಬಿರದಲ್ಲಿ ಹಾಜರಿದ್ದರು.