ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಶಿಕ್ಷಣದ ಜೊತೆ ಮಕ್ಕಳು ಕ್ರೀಡೆಯಲ್ಲಿ ತೊಡಗಿಕೊಂಡಾಗ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬಹುದೆಂದು ಬಾಪೂಜಿ ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ತಿಳಿಸಿದರು.
ಖೇಲೋ ಬಾಪೂಜಿ ಹೆಸರಿನಲ್ಲಿ ಮೂರು ದಿನಗಳ ಕಾಲ ನಡೆದ ವಾರ್ಷಿಕ ಕ್ರೀಡೋತ್ಸವವನ್ನು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕ್ರೀಡೆ ಮಕ್ಕಳಲ್ಲಿ ಒತ್ತಡ ಕಡಿಮೆಗೊಳಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಪೋಷಕರು ಹಾಗೂ ದೈಹಿಕ ಶಿಕ್ಷಕರುಗಳು ಮಕ್ಕಳಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಕ್ರೀಡಾಧಿಕಾರಿ ಸುರೇಶ್ ಮಾತನಾಡುತ್ತ ಕ್ರೀಡಾ ಮನೋಭಾವನೆ ಮಕ್ಕಳಲ್ಲಿ ಹೆಚ್ಚಾಗಬೇಕು. ಆಗ ಮಾತ್ರ ಲವಲವಿಕೆಯಿಂದ ಇರಲು ಸಾಧ್ಯ. ಸೋಲು-ಗೆಲುವಿಗಿಂತ ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಬೇಕೆಂದು ಹೇಳಿದರು.
ಬಾಪೂಜಿ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಕೆ.ಎಂ.ಚೇತನ್ ಮಾತನಾಡಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿರುವುದರಿಂದ ಕಡ್ಡಾಯವಾಗಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಬಾಪೂಜಿ ನಗರದಲ್ಲಿರುವ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್ ರ್‍ಯಾಲಿ ಮೂಲಕ ಕ್ರೀಡಾ ಜ್ಯೋತಿಯನ್ನು ಪ್ರಮುಖ ರಸ್ತೆ ಮೂಲಕ ಬಾಪೂಜಿ ಪಬ್ಲಿಕ್ ಸ್ಕೂಲ್ ಆವರಣಕ್ಕೆ ತರಲಾಯಿತು.
ಬಾಪೂಜಿ ಶಿಕ್ಷಣ ಸಂಸ್ಥೆಯ ಸಂಯೋಜಕ ಹನುಮಂತರೆಡ್ಡಿ, ಎಲ್ಲಾ ಅಂಗ ಸಂಸ್ಥೆಗಳ ಮುಖ್ಯೋಪಾಧ್ಯಾಯರುಗಳು, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕಿಯರು, ಬೋಧಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

