ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ಶಾಸಕ ಶಿವಲಿಂಗೇಗೌಡರ ವಿರುದ್ಧವೂ ಪಕ್ಷದ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳಲಿ, ಪಕ್ಷಕ್ಕೆ ಡ್ಯಾಮೇಜ್ ಮಾಡುವ ಹಿರಿಯ ನಾಯಕರ ಮೇಲೆ ಕ್ರಮವಾಗಲಿ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಆಗ್ರಹ ಮಾಡಿದ್ದಾರೆ.
ದಾವಣಗೆರೆಯ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕೆ ಎನ್ ರಾಜಣ್ಣನವರ ವಿರುದ್ಧ ಹೈಕಮಾಂಡ್ ಹೇಗೆ ಕ್ರಮ ಕೈಗೊಂಡಿತೋ ಅದೇ ರೀತಿ ಅರಸೀಕೆರೆ ಶಾಸಕ ಶಿವಲಿಂಗೇಗೌಡರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಚುನಾವಣೆಯಲ್ಲಿ ಜನರಿಗೆ ಏಳು ಕೋಟಿ ರೂ ಹಂಚಿಕೆ ಮಾಡಿರುವ ಹೇಳಿಕೆಯ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ ಶಿವಲಿಂಗೇಗೌಡರು ಈ ರೀತಿ ಹೇಳಿಕೆ ಕೊಡುವುದು ತಪ್ಪು. ಒಬ್ಬ ಹಿರಿಯ ಶಾಸಕರೇ ಈ ರೀತಿ ಹೇಳಿಕೆ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಪಕ್ಷದ ವಿರುದ್ಧವಾಗಿ ಹೇಳಿಕೆ ಕೊಟ್ಟು ಈಗ ರಾಜಣ್ಣ ಅನುಭವಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಆಡಿಯೋ ಪರಿಶೀಲಿಸಿ ಶಿವಲಿಂಗೇಗೌಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇಂಥ ವಿಚಾರದಲ್ಲಿ ಜಾತಿಗಳನ್ನು ತರುವುದು ಸರಿಯಲ್ಲ, ನಾಗೇಂದ್ರ ಅವರ ವಿರುದ್ಧ ರಾಜೀನಾಮೆ ತಗೊಳ್ಳಿ ಎಂದು ಹೇಳಿದ್ದು ಬಿಜೆಪಿ. ಅವರೇ ಈಗ ಜಾತಿ ಬಗ್ಗೆ ಮಾತನಾಡುವುದು ಎಷ್ಟು ಸರಿ? ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿಗೆ ರಾಜ್ಯಾಧ್ಯಕ್ಷರ ಆಯ್ಕೆ ಸೇರಿದಂತೆ 108 ಸಮಸ್ಯೆ ಇದೆ. ಕಾಂಗ್ರೆಸ್ ಬಗ್ಗೆ ಯಾಕೆ ಮಾತನಾಡಬೇಕು, ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಯೋಚನೆ ಮಾಡಲಿ ಎಂದು ತಿರುಗೇಟು ನೀಡಿದರು.
ಮಾಜಿ ಸಚಿವ ಶ್ರೀರಾಮುಲು ಅವರು ಕೆ.ಎನ್.ರಾಜಣ್ಣ ಬಿಜೆಪಿಗೆ ಬರಲಿ ಎಂದು ಆಹ್ವಾನ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಸವರಾಜ್, ರಾಜಣ್ಣ ಶಿಸ್ತಿನ ಸಿಪಾಯಿ. ಅವರು ಎಂದಿಗೂ ಪಕ್ಷ ಬಿಟ್ಟು ಹೋಗುವುದಿಲ್ಲ. ಸಣ್ಣಪುಟ್ಟ ತಪ್ಪಾಗಿದ್ದರೆ ಬಗೆಹರಿಸಿಕೊಳ್ಳುತ್ತಾರೆಂದು ತಿಳಿಸಿದರು.

