ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ…

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ…

ಹೀಗೆ ಬಹಳ ಹಿಂದಿನಿಂದಲೂ ಮತ್ತು ಈಗಲೂ ಸಹ ಅನೇಕ ತತ್ವಜ್ಞಾನಿಗಳು, ಸಾಹಿತಿಗಳು, ಪತ್ರಕರ್ತರು, ವಿರಹಿಗಳು, ಭಾವನಾ ಜೀವಿಗಳುಮುಂತಾದವರು ಆಗಾಗ ಹೇಳುತ್ತಲೇ ಇರುತ್ತಾರೆ. ಏಕೆಂದರೆ ಬದುಕಿನ ಮುಂದಿನ ಉಳಿದ ದಿನಗಳು ಎಷ್ಟಿವೆಯೋ ಯಾರಿಗೂ ತಿಳಿದಿಲ್ಲ. ಆ ಉಳಿದ ಸಮಯವನ್ನು ತೀವ್ರವಾಗಿ ಬದುಕಬೇಕೆಂಬ ಉತ್ಕಟ, ಅದಮ್ಯ ಭಾವನೆ ಜಾಗೃತವಾದಾಗ ಈ ರೀತಿಯ ಮಾತುಗಳು ಹೊರಡುತ್ತವೆ……

 ಕೊಲ್ಕತ್ತಾದ  ರವೀಂದ್ರನಾಥ್ ಟ್ಯಾಗೋರ್ ಅವರ ಸಮಾಧಿ ಬಳಿ ಹೋಗುವ ದಾರಿಯಲ್ಲಿ ರೈಲು ಕಂಬಿಗಳ ಪಕ್ಕದಲ್ಲಿ ವಾಸಿಸುತ್ತಿದ್ದ ಸಾವಿರಾರು ಕುಟುಂಬಗಳ ಬದುಕನ್ನು ನೋಡಿದಾಗ ಯಾರಿಗಾದರೂ ಹೀಗೆ ಅನಿಸುತ್ತದೆ. ಆ ದೃಶ್ಯಗಳು ಒಂದು ರೀತಿಯಲ್ಲಿ ಮನಕಲಕುವಂತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಸಹ ಈ ರೀತಿಯ ದೃಶ್ಯಗಳು ಕೆಲವು ಕಡೆ ಇದೆ. ಮೋರಿ, ಚರಂಡಿ, ಕೊಳಚೆ ನೀರು ಹರಿಯುವ ಜಾಗದ ಪಕ್ಕ, ಕೆಲವು ಸಿಮೆಂಟ್ ಪೈಪುಗಳ ಒಳಗಡೆ, ಅಲ್ಲೇ ಹುಟ್ಟಿ ಅಲ್ಲೇ ಬೆಳೆದ ಲಕ್ಷಾಂತರ ಜನ  ಬದುಕುತ್ತಿದ್ದಾರೆ…..

 ಮುಂಬೈಯ ಅಂಧೇರಿಯ ಕೊಳಗೇರಿ ಭಾರತದಲ್ಲಿ ಅತ್ಯಂತ ಕುಖ್ಯಾತ ಬೃಹತ್ ಕೊಳಗೇರಿ ಎಂದು ಹೆಸರುವಾಸಿಯಾಗಿದೆ. ಬಹುತೇಕ ದೇಶದ ದೊಡ್ಡ ಪಟ್ಟಣಗಳಲ್ಲಿ ಈ ರೀತಿಯ ಕೊಳಗೇರಿಗಳು ಸಾಕಷ್ಟು ಅಸ್ತಿತ್ವದಲ್ಲಿದೆ……

 ಅಲ್ಲಿ ವಾಸಿಸುತ್ತಿರುವವರು ಬೇರೆ ಯಾರು ಅಲ್ಲ. ನಮ್ಮದೇ ದೇಶದ ಪ್ರಜೆಗಳು, ನಮ್ಮದೇ ಸಂಬಂಧಿಗಳು, ನಮ್ಮದೇ ಸಮಾಜದ ಸಹೋದರ ಸಹೋದರಿಯರು. ಅಲ್ಲಿ ಒಂದು ಸರಿಯಾದ ಸ್ನಾನಗೃಹ, ಶೌಚಗೃಹ, ಮಲಗುವ ಕೋಣೆ ಇರಲಿ ಕಾಲು ಸಂಪೂರ್ಣ ಚಾಚಿ ಮಲಗುವುದು ಸಹ ಸಾಧ್ಯವಿಲ್ಲದಷ್ಟು ಚಿಕ್ಕ ಪ್ಲಾಸ್ಟಿಕ್ ಗುಡಿಸಲುಗಳು. ಕುಡಿಯುವುದು ಅತ್ಯಂತ ಕಲುಷಿತವಾದ ನೀರು, ಉಸಿರಾಡುವುದು ಅತ್ಯಂತ ಮಲಿನವಾದ ಗಾಳಿ, ಆಹಾರ ಅತ್ಯಂತ ಅನಾರೋಗ್ಯಕರ ಗುಣಮಟ್ಟವನ್ನು ಹೊಂದಿರುತ್ತದೆ. ಆ ಮೂಲಭೂತ ಅವಶ್ಯಕತೆಗಳ ವಿಷಯದಲ್ಲಿ ಅವರಿಗೆ ಆಯ್ಕೆಗಳೇ ಇಲ್ಲ…..

 ಇನ್ನು ಬಟ್ಟೆ ಯಾರೋ ದಾನ ನೀಡಿದ್ದು ಆಗಿರಬೇಕು, ಶಾಲೆ ಕಾಲೇಜು ದೂರದ ಮಾತು, ಆರೋಗ್ಯ ತಪಾಸಣಾ ಶಿಬಿರಗಳು ಅಥವಾ ಆಗಾಗ ಒಂದಷ್ಟು ದಾನಿಗಳು ನೀಡುವ ಹಣ್ಣು ಹಂಪಲುಗಳು ಮತ್ತು ಉಳಿದ ಆಹಾರವೇ ಅವರಿಗೆ ಮೃಷ್ಠಾನ್ನ ಭೋಜನ. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಂತರ ಜನ ವಾಸಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲು, ಚಳಿ ಈ ಎಲ್ಲವನ್ನು ಅದು ಹೇಗೋ ಸಹಿಸಿಕೊಂಡು ಎದುರಿಸಿ ಇನ್ನೂ ಜೀವಂತ ಇದ್ದಾರೆ…..

 ಬಹುಶಃ ಕರೋನಗಿಂತ ಭೀಕರ ವೈರಸ್ ಗಳು ಸಹ ಇವರ ಆ ಪರಿಸ್ಥಿತಿಯನ್ನು ನೋಡಿ ಸ್ವತಃ ಆ ವೈರಸ್ ಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತವೋ ಏನೋ, ಅಷ್ಟೊಂದು ಮಲಿನ ಪರಿಸ್ಥಿತಿಯ ವಾತಾವರಣವಿದೆ……

 ಅಲ್ಲಿ ವಾಸಿಸುವ ಜನ ಮೂಲ ನಿವಾಸಿಗಳೋ, ಅಕ್ರಮ ವಲಸಿಗರೋ, ದಾಖಲೆಗಳಿಲ್ಲದ ಮತ್ಯಾರೋ ಏನೇ ಆಗಿರಲಿ ಆದರೆ ಅವರೆಲ್ಲರೂ ಮನುಷ್ಯರೆಂಬುದು ಮಾತ್ರ ಸತ್ಯ ಮತ್ತು ಬದುಕು ಅವರಿಗೆ ಅನಿವಾರ್ಯವಾಗಿದೆ ಎಂಬುದು ಅಷ್ಟೇ ವಾಸ್ತವ. ಯಾರೇ ಆಗಿರಲಿ ಅಲ್ಲಿನ ವಾಸ ಅವರ ಆಯ್ಕೆಯಾಗಿರುವುದು ಸಾಧ್ಯವೇ ಇಲ್ಲ. ಏಕೆಂದರೆ ಆ ಅವಕಾಶವೇ ಅವರಿಗೆ ಇಲ್ಲ……..

 ಆದ್ದರಿಂದ ಆ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ. ಶ್ರೀಮಂತರ ಸರಳತೆಯ ಬಗ್ಗೆ ಸಾಕಷ್ಟು ಮಾತನಾಡುವ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಮೂಲಭೂತ ಸೌಕರ್ಯಗಳಿಂದಲೇ ವಂಚಿತವಾಗಿರುವ ಇವರ ಬಗ್ಗೆ ದಿವ್ಯ ನಿರ್ಲಕ್ಷ ಅಥವಾ ತಿರಸ್ಕಾರವನ್ನು ಹೊಂದಿದ್ದಾರೆ. ಹಾಗೆಯೇ ಎಲ್ಲಾ ಧರ್ಮದ ಧಾರ್ಮಿಕ ನಾಯಕರುಗಳು ಕರ್ಮ ಸಿದ್ದಾಂತಕ್ಕೆ ಶರಣಾಗಿ ಅದು ಅವರವರ ಕರ್ಮಫಲ ಎಂದು ಇದನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ರಾಜಕಾರಣಿಗಳು ಇವರನ್ನು ಚುನಾವಣಾ ರಾಜಕೀಯದ ಭಾಗವಾಗಿ ವೋಟಿನ ಗುಲಾಮರಾಗಿ ಬಳಸಿಕೊಳ್ಳುತ್ತಾರೆ. ಅಧಿಕಾರಿಗಳು ಇವರನ್ನು ತಮ್ಮ ಭ್ರಷ್ಟ ಹಣ ಸಂಪಾದನೆಯ ಮಾರ್ಗಗಳ ರೂಪದಲ್ಲಿ ನೋಡುತ್ತಾರೆ. ಇನ್ನು ಕೆಲವು ಹೋರಾಟಗಾರರು ಒಂದಷ್ಟು ಇವರ ಪರವಾಗಿ ಹೋರಾಡಿ ಹೆಸರು ಗಳಿಸುತ್ತಾರೆ. ಬರಹಗಾರರು ನನ್ನಂತೆ ಬರೆದು ತಮ್ಮ ತೆವಲು ತೀರಿಸಿಕೊಳ್ಳುತ್ತಾರೆ. ಆದರೆ ಅವರ ಬದುಕು ಮಾತ್ರ ಎಷ್ಟೋ ವರ್ಷಗಳಿಂದ ಹೀಗೆಯೇ ಮುಂದುವರಿಯುತ್ತಲೇ ಇದೆ…….

 ಈ ನೆಲದ, ಈ ದೇಶದ, ಈ ಸಮಾಜದ ಪ್ರಾಕೃತಿಕ ಸಂಪನ್ಮೂಲಗಳನ್ನು ಸರಿಯಾಗಿ ಹಂಚಿಕೆ ಮಾಡಿದ್ದೇ ಆದರೆ ಈ ಜನರು  ಇದಕ್ಕಿಂತ ಉತ್ತಮ ಜೀವನವನ್ನು ನಡೆಸುವಂತ ವಾತಾವರಣ ಸೃಷ್ಟಿಸಬಹುದು. ಕೇವಲ ಒಂದು ಬೃಹತ್ ಸಂಕಲ್ಪ ಮಾತ್ರ ಇದಕ್ಕೆ ಸಾಕಾಗುತ್ತದೆ. ಅಷ್ಟನ್ನೂ ಮಾಡುವ ಸ್ಥಿತಿಯಲ್ಲಿ ನಾವುಗಳು ಇಲ್ಲ………

 ನಾವು ಬದುಕುತ್ತಿರುವ ಮಧ್ಯಮ ವರ್ಗದ ಜೀವನಶೈಲಿಯನ್ನು ಈ ಕೊಳಗೇರಿ ನಿವಾಸದ ಜೀವನ ಶೈಲಿಗೆ ಹೋಲಿಕೆ ಮಾಡಿದಾಗ ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ ಎಂಬುದು ಅಕ್ಷರಶಃ ಕಾಡುತ್ತದೆ. ಆ ಪುಟ್ಟ ಪುಟ್ಟ ಮಕ್ಕಳು, ತಾಯಂದಿರು ಭವಿಷ್ಯದ ಯಾವುದೇ ಆಸೆ, ಕನಸು, ಭರವಸೆಗಳಿಲ್ಲದೆ ನಿರ್ಜೀವವಾಗಿ ಜೀವನವನ್ನು ಕಳೆಯುವ ಪರಿಸ್ಥಿತಿ ಊಹಿಸಲಸಾಧ್ಯ……

 ಅನಾದಿಕಾಲದಲ್ಲಿ ಕನಿಷ್ಠ ಕಾಡು ಮೇಡುಗಳಲ್ಲಿ, ಬೆಟ್ಟ ಗುಡ್ಡ ಕಣಿವೆಗಳಲ್ಲಿ, ಹೇಗೋ ಹಣ್ಣು, ತರಕಾರಿ, ಸೊಪ್ಪನ್ನು ತಿನ್ನುತ್ತಾ ಬದುಕಬಹುದಾಗಿತ್ತು. ಈಗ ಆ ಅವಕಾಶವೂ ಇಲ್ಲ, ಛೇ……ಲೇಖನ:ವಿವೇಕಾನಂದ. ಎಚ್. ಕೆ. 9844013068………

 

 

- Advertisement -  - Advertisement - 
Share This Article
error: Content is protected !!
";