ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಬೆಳವಣಿಗೆಗೆ ಐತಿಹಾಸಿಕ ಹಿನ್ನೆಲೆಯಿದೆ, ಇಡೀ ಭಾರತದಲ್ಲೇ ಅತ್ಯಂತ ಯೋಜಿತ ನಗರವಾಗಿ ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಬೆಂಗಳೂರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪಕ್ಷ ರಾಜಕಾರಣವನ್ನು ಬದಿಗೊತ್ತಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಶ್ರಮಿಸಿದ ಹಿರಿಯ ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಪಕ್ಷಾತೀತವಾಗಿ ಸಮಗ್ರ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಒಂದು ಉತ್ತಮ ಯೋಜನೆಯನ್ನು ರೂಪಿಸುವುದು ಕಷ್ಟ ಸಾಧ್ಯವೇನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಗ್ರೇಟರ್ ಬೆಂಗಳೂರು ಯೋಜನೆಯಿಂದ ಆರ್ಥಿಕ ಹಾಗೂ ಅಭಿವೃದ್ಧಿಯ ಅಸಮಾನತೆ ಉದ್ಬವಿಸಲಿದ್ದು ಒಟ್ಟು ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸಮತೋಲನ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಹಿಡನ್ ಅಜೆಂಡಾ ಇಟ್ಟುಕೊಂಡವರ ತಾಳಕ್ಕೆ ತಕ್ಕಂತೆ ಗ್ರೇಟರ್ ಬೆಂಗಳೂರು ಯೋಜನೆಯನ್ನು ಜಾರಿಗೆ ತರುವ ಮೂಲಕ ಬೆಂಗಳೂರಿನ ಬೆಳವಣಿಗೆಗೆ ಪೆಟ್ಟು ನೀಡಲು ಹೊರಟಿರುವುದು ಅವಿವೇಕತನದ ಕ್ರಮವಾಗಿದೆ ಎಂದು ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ, “ದೇವರೇ ಬಂದರೂ ಬೆಂಗಳೂರಿನ ಸ್ಥಿತಿ ಸರಿಪಡಿಸಲು ಸಾಧ್ಯವಿಲ್ಲ ಎನ್ನುವ ಫಲಾಯನವಾದದ ಮಾತನ್ನು ಬದಿಗೊತ್ತಿ” ಸರ್ಕಾರ ತೆರೆದ ಹೃದಯದಿಂದ ಎಲ್ಲರೊಂದಿಗೂ ಚರ್ಚಿಸಿ, ಸ್ವಲ್ಪ ತಡವಾದರೂ ಚಿಂತೆಯಿಲ್ಲ ಒಂದು ಉತ್ತಮ ಯೋಜನೆಯನ್ನು ರೂಪಿಸಿ ಮೂಲ ಬೆಂಗಳೂರಿನ ಪರಂಪರೆಗೆ ಧಕ್ಕೆ ಬಾರದ ರೀತಿಯಲ್ಲಿ , ಆಧುನಿಕ ಬೆಂಗಳೂರನ್ನು ಬೆಳೆಸುಳಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಅವರು ತಾಕೀತು ಮಾಡಿದ್ದಾರೆ.