ಚಂದ್ರವಳ್ಳಿ ನ್ಯೂಸ್, ಬೆಂಗಳೂರು:ಕ್ರಿ.ಶ.1
849 ರಲ್ಲಿ ನಡೆದ ದುರ್ಗದ ಬೇಡರ್ದಂಗೆ ಇತಿಹಾಸದ ಪುಟಗಳಲ್ಲಿ ದಾಖಲಾಗ ಬೇಕಿದೆ.
ಬ್ರಿಟಿಷರ ವಿರುದ್ಧ ರಾಜ ಮಹಾರಾಜರುಗಳು ತಮ್ಮ ಪಟ್ಟ ಪದವಿ ಸಿಂಹಾಸನಕ್ಕಾಗಿ ಹೋರಾಡಿದ್ದಾರೆ ನಿಜ.ಆದರೆ ಸಾಮಾನ್ಯ ಸಿಪಾಯಿಗಳು ದಂಗೆಯೆದ್ದು ಕ್ರಿ.ಶ.1857 ರಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಪ್ರಥಮ
ಹೋರಾಟ ಸಿಪಾಯಿ ದಂಗೆ ಎಂದೇ ಜನಮಾನಸದಲ್ಲಿ ದಾಖಲಾಗಿದೆ.
ಆದರೆ ಅದಕ್ಕೂ ಮೊದಲೇ ಕ್ರಿ.ಶ.1849 ರಲ್ಲಿಯೇ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದ ಏಳು ಮಂದಿ ಸಾಮಾನ್ಯ ಬೇಡರ ಹುಡುಗರು ಬ್ರಿಟಿಷರ ವಿರುದ್ಧ ಹೋರಾಡಿದ ಐತಿಹಾಸಿಕ ಘಟನೆಯು ಎಲ್ಲೂ ದಾಖಲೆಯಾಗಿಲ್ಲ. ಕಾರಣ ಇಲ್ಲಿನ ಸಂಶೋಧಕರುಗಳು ಈ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಂಡು ಬರುವುದಿಲ್ಲ.
ತುಮಕೂರಿನ ಖ್ಯಾತ ಇತಿಹಾಸ ಸಂಶೋಧಕರಾದ ಡಾ.ಬಿ.ನಂಜುಂಡಸ್ವಾಮಿ ಅವರು ಈ ಬಗ್ಗೆ ದಾಖಲೆಗಳ ಸಮೇತ ಶೋಧಿಸಿದ್ದು, ದುರ್ಗದಲ್ಲಿ ನಡೆದ ಇತಿಹಾಸ ಕೂಟದ ಸಮಾರಂಭದಲ್ಲಿ “ಡಾಬ್ಸ್ ಇನ್ ಚಿಟಲ್ ಡೂರ್ಗ್” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದಾಗ ಕೇಳುಗರು ದಂಗಾದರಲ್ಲದೆ. ಇಂತಹ ಅಮೂಲ್ಯ ಸಂಗತಿ ಇತಿಹಾಸದಲ್ಲಿ ದಾಖಲಾಗಿಲ್ಲವಲ್ಲ ಎಂದೂ ವಿಷಾದಿಸಿದ್ದುಂಟು. ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಆಗ ಆರ್.ಎಸ್.ಡಾಬ್ಸ್ ಎಂಬ ಆಂಗ್ಲ ಅಧಿಕಾರಿ ಆಳ್ವಿಕೆ ನಡೆಸುತ್ತಿದ್ದ ಕಾಲವದು.
ಆಗ ಸಾಮಾನ್ಯ ಏಳು ಮಂದಿ ಬೇಡರ ಹುಡುಗರು ದೊಡ್ಡೇರಿ ಕಾಡಿನಲ್ಲಿ ಅವಿತು ಕೊಂಡು ಊರ ಗೌಡರ ನೆರವಿನಿಂದ ತಮ್ಮದೇ ಆದ ದಂಡುಕಟ್ಟಿ ಬ್ರಿಟಿಷರ ವಿರುದ್ಧವಾಗಿ ಹೋರಾಟ ನಡೆಸುತ್ತಾರೆ. ಬ್ರಿಟಿಷರ ದೊಡ್ಡ ಸೇನೆಯ ವಿರುದ್ಧ ಸೆಣಸಾಡುತ್ತಾ ರಾಮಗಿರಿ ಅರಣ್ಯದಲ್ಲಿ ಅವಿತುಕೊಂಡಿದ್ದು, ಅಲ್ಲಿಗೇ ಧಾಳಿಯಿಟ್ಟ ಬ್ರಿಟಿಷ್ ಸೇನೆ ಅವರುಗಳನ್ನು ಸೆರೆಹಿಡಿದು ದುರ್ಗಕ್ಕೆ ತಂದು ಕೋಟೆಯ ಮೇಲಿನ ಏಕನಾಥೇಶ್ವರಿ ದೇವಾಲಯದ ಬಯಲಿನಲ್ಲಿ ಸಮಸ್ತ ಜನರ ಎದುರೇ ನೇಣುಗಂಬಕ್ಕೆ ಏರಿಸುತ್ತಾರೆ. ಏಳು ಜನ ಬೇಡ ಹುಡುಗರು ಹುತಾತ್ಮರಾಗುತ್ತಾರೆ.
ಅದಕ್ಕೂ ಮುನ್ನವೆ 18ನೇ ಶತಮಾನದಲ್ಲಿಯೇ ಬ್ರಿಟಿಷರನ್ನು ಓಡಿಸಲು ಬೇಡ ಹುಡುಗರು ಸಿಪಾಯಿದಂಗೆಗಿಂತಲೂ ಮೊದಲೇ ತೋರಿದ ಸಾಹಸ ದುರ್ಗದವರಷ್ಟೇ ಅಲ್ಲ. ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಸಂಗತಿ. ಈ ಬಗ್ಗೆ ಹೆಚ್ಚು ತಿಳಿಯುವ ಉತ್ಸಾಹ ನಿಮಗಿದ್ದರೆ ಡಾ.ಬಿ.ಎಲ್.ವೇಣು ಅವರು ಬರೆದ ದುರ್ಗದ ಬೇಡರ್ದಂಗೆ ಐತಿಹಾಸಿಕ ಕಾದಂಬರಿಯನ್ನು ಓದಬಹುದು.
ಬ್ರಿಟಿಷರ ವಿರುದ್ಧ ಟಿಪ್ಪುಸುಲ್ತಾನ್ ಕಿತ್ತೂರು ಚೆನ್ನಮ್ಮ ಝಾನ್ಸಿರಾಣಿ ವೀರ ಸಿಂಧೂರ ಲಕ್ಷ್ಮಣ ಸಂಗೊಳ್ಳಿ ರಾಯಣ್ಣ ಸುರಪುರದ ವೆಂಕಟಪ್ಪನಾಯಕ ಇಂತಹ ಅನೇಕರು ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ.
ಇವರೆಲ್ಲರೂ ಮಹಾತ್ಮ ಗಾಂಧಿ ಆಗಮನ ವಾಗುವವರೆಗೆ ಹೋರಾಟದ ಕಿಚ್ಚನ್ನು ಹಾಗೇ ಉಳಿಸಿಕೊಂಡು ಬಂದ ವೀರಾಗ್ರಣಿಗಳು. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲವೆ. ಇಂತಹ ರಣಕಲಿಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಹಾಗೂ ಹೆಮ್ಮೆಯ ವಿಷಯವಾಗಬೇಕಲ್ಲವೆ.
ಅದಕ್ಕಿಂತಲೂ ಮಿಗಿಲಾಗಿ “ಸಿಪಾಯಿ ದಂಗೆ” ಗಿಂತಲೂ ಎಂಟು ವರ್ಷಗಳ ಮೊದಲೇ ದುರ್ಗದಲ್ಲಿ ನಡೆದ ದುರ್ಗದ ಬೇಡರ್ದಂಗೆ ಸಹ ಇತಿಹಾಸದಲ್ಲಿ ದಾಖಲಾಗ ಬೇಕಲ್ಲವೆ. ಇದು ಕರ್ನಾಟಕಕ್ಕೇ ಹೆಗ್ಗಳಿಕೆಯ ಸಂಗತಿಯಾಗ ಬೇಕಲ್ಲವೆ. ಇಂತಹ ವಿಷಯಗಳ ಬಗ್ಗೆ ಜಿಲ್ಲಾಡಳಿತ ಕೂಡ ಗಮನಹರಿಸ ಬೇಕಲ್ಲವೆ.
ಲೇಖನ-ಡಿ.ಗೋಪಾಲಸ್ವಾಮಿ ನಾಯಕ, ಮದಕರಿ ಬಳಗ, ಚಿತ್ರದುರ್ಗ.

