ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ನೀರಾವರಿ ಯೋಜನೆಗಳು, ಅನುದಾನಗಳ ಬಗ್ಗೆ ಬಿಜೆಪಿ ಸಂಸದರು ಬಾಯಿ ಬಿಡಬೇಕು! ಎಂದು ಜಲಸಂಪನ್ಮೂಲ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಾಕೀತು ಮಾಡಿದರು.
ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೇಳುವ ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರು ಮೌನ ವಹಿಸಿದ್ದಾರೆ. ನಾನು ಪ್ರಧಾನಿ, ಹಣಕಾಸು ಸಚಿವರು, ಮತ್ತು ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಭದ್ರಾ ಅಣೆಕಟ್ಟು ಐದು ಜಿಲ್ಲೆಗಳಿಗೆ ಜೀವನಾಡಿಯಾಗಿದ್ದು, ರೈತರ ಜೀವನ ಹಸನು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಏಕೆಂದರೆ ಸಂಬಳವಿಲ್ಲದೆ, ನಿವೃತ್ತಿ ಹೊಂದದೆ, ಪಿಂಚಣಿ ಪಡೆಯದೇ ಸದಾ ದುಡಿಯುವ ಕಾಯಕಯೋಗಿ ರೈತ. ಕಾಂಗ್ರೆಸ್ ಸರ್ಕಾರದ ಮೇಲೆ ಜನರಿಗೆ ನಂಬಿಕೆಯಿದೆ. ಈ ನಂಬಿಕೆಯನ್ನು ನಾವು ಉಳಿಸಿಕೊಂಡಿದ್ದೇವೆ.
ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಅನುದಾನ, ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಅನುಮತಿ ಸೇರಿದಂತೆ ಕರ್ನಾಟಕದ ಪರವಾಗಿ ಬಿಜೆಪಿ ಸಂಸದರು ಕೇಂದ್ರದಲ್ಲಿ ಧ್ವನಿ ಎತ್ತಬೇಕು. ನಾವು ನಮ್ಮ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.

