ಚಂದ್ರವಳ್ಳಿ ನ್ಯೂಸ್, ತುಮಕೂರು:
ಸುವರ್ಣ ಕರ್ನಾಟಕದ ಸಂಭ್ರಮ ಆಚರಿಸುವ ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಆಚರಿಸುವ ‘ರಾಜ್ಯೋತ್ಸವ ಆಚರಣೆ’ ವಿಶೇಷವಾಗಿರಲಿ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ರವರೊಂದಿಗೆ ಮಾತನಾಡಿ, ರಾಜ್ಯೋತ್ಸವ ದಿನ ಧ್ವಜಾರೋಹಣ, ಮೆರವಣಿಗೆ, ನಂತರ ಕರ್ನಾಟಕದ ಏಕೀಕರಣದ ಬಗ್ಗೆ, ಕರ್ನಾಟಕದ ವರ್ತಮಾನದ ಸವಾಲುಗಳ ಬಗ್ಗೆ, ತುಮಕೂರು ಜಿಲ್ಲೆಯ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳ ಬಗ್ಗೆ ವಿಶೇಷ ವಿಚಾರ ಸಂಕಿರಣ ನಡೆಸಿದರೆ ರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗಿರುತ್ತದೆ ಎಂದರು.
ಜಿಲ್ಲಾಧಿಕಾರಿಗಳು ಚರ್ಚೆ ಮಾಡುತ್ತಾ ಬರಗೂರರ ಸಲಹೆ ಸ್ವಾಗತಿಸಿ ಜಿಲ್ಲೆಯ ಸಾಧಕರುಗಳ ಭಾವಚಿತ್ರದೊಂದಿಗೆ ಮೆರವಣಿಗೆ ಹಾಗೂ ಸಾಧ್ಯವಾದರೆ ಶಾಲಾ ಕಾಲೇಜುಗಳಲ್ಲಿ ಸಾಹಿತಿ, ಕಲಾವಿದರ ಸಾಧನೆಗಳ ವಿಶೇಷ ಉಪನ್ಯಾಸ ಮುಂತಾದ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರು.
ನವೆಂಬರ್ 1ನೇ ತಾರೀಖಿನಂದೇ ಮಹಾತ್ಮಗಾಂಧಿ ಕ್ರೀಡಾಂಗಣದ ಕಾರ್ಯಕ್ರಮ ಮುಗಿದ ನಂತರ, ಗುಬ್ಬಿವೀರಣ್ಣ ರಂಗಮಂದಿರಲ್ಲಿ ವಿಚಾರ ಸಂಕಿರಣ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ನಂತರ ನಡೆದ ಚರ್ಚೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮನಮೋಹನ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪ್ರಾಧ್ಯಾಪಕ ನಾಗಭೂಷಣ ಬಗ್ಗನಡು, ಗೋವಿಂದಯ್ಯ, ಕೆ.ಎಸ್.ಉಮಾಮಹೇಶ್, ಡಾ. ಕೆ.ಸಣ್ಣಹೊನ್ನಯ್ಯ ಕಂಟಲಗೆರೆ, ಜಿ.ಹೆಚ್.ಮಹದೇವಪ್ಪ, ರಾಣಿಚಂದ್ರಶೇಖರ್, ಚಾಂದು ಉಪಸ್ಥಿತರಿದ್ದರು.