ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಯುಕ್ತ ಕಿಸಾನ್ ಮೋರ್ಚಾ ಶಂಭು ಗಡಿಯಲ್ಲಿ ನಡೆಸುತ್ತಿರುವ ಚಳುವಳಿಯ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಚರ್ಚಿಸಿ ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ರೈತರು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಎಂಎಸ್ ಪಿಯನ್ನು ಕಾನೂನಾತ್ಮಕವಾಗಿ ಜಾರಿ ಮಾಡುವುದು, ವಿದ್ಯುತ್ಚಕ್ತಿ ಖಾಸಗೀಕರಣ ಮಾಡಬಾರದೆಂದು ಒತ್ತಾಯಿಸಿ ದೆಹಲಿ ಹೊರವಲಯದಲ್ಲಿ 13 ತಿಂಗಳ ಕಾಲ ಸತತವಾಗಿ ನಡೆಸುತ್ತಿರುವ ಚಳುವಳಿಗಾರರ ಬೇಡಿಕೆಗಳನ್ನು ಕೇಂದ್ರ ಆಡೇರಿಸಬೇಕು ಎಂದು ರೈತರು ಆಗ್ರಹ ಮಾಡಿದರು.
ಆ ಸಂದರ್ಭದಲ್ಲಿ 700ಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಹುತಾತ್ಮರಾದರು. ನಂತರ ಕೇಂದ್ರ ಸರ್ಕಾರ ಚಳುವಳಿಗೆ ಮಣಿದು ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಿತು. ಮತ್ತು ಆ ಸಂದರ್ಭದಲ್ಲಿ ಎಂ.ಎಸ್.ಪಿ ಕಾನೂನು ಬದ್ಧವಾಗಿ ಜಾರಿ ಮಾಡುವುದಾಗಿ, ವಿದ್ಯುತ್‌ಚ್ಛಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ಲಿಖಿತ ಭರವಸೆ ಕೊಟ್ಟಿತ್ತು.
ಲಿಖಿತ ಭರವಸೆ ಕೊಟ್ಟು 2 ವರ್ಷಗಳು ಕಳೆದರೂ ಎಂ.ಎಸ್.ಪಿ ಜಾರಿ ಮಾಡದ ಕಾರಣ ಪುನಃ ಹರಿಯಾಣದ ಶಂಭು ಗಡಿಯಲ್ಲಿ 8 ತಿಂಗಳುಗಳಿಂದ ರೈತರು ಚಳುವಳಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ರೈತ ನಾಯಕ ಜಗತ್ ಸಿಂಗ್ ದಲ್ಲಿ ವಾಲ್ಲೈವಾಲರವರು 39 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೋಸ್ಕರ ಜೀವನ್ಮರಣದ ಮಧ್ಯ ಹೋರಾಡುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರ ಇವರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ನ್ಯಾಯವಾಗಿ ಪರಿಹಾರ ಕೊಟ್ಟು ಅಮೂಲ್ಯವಾದಂತಹ ಅವರ ಜೀವ ಉಳಿಸಬೇಕೆಂದು ಎರಡು ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ. ಆದಾಗ್ಯೂ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಚಳುವಳಿ ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತ ದೇಶದ ರೈತರ ಪರವಾಗಿ ಚಳುವಳಿ ನಡೆಯುತ್ತಿದೆ. ಜಗತ್ ಸಿಂಗ್ ದಲ್ಲೈವಾಲರವರು ಸಹ ಈ ದೇಶದ ರೈತರ ಪರವಾಗಿ ಗಾಂಧಿಜೀಯವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಅಹಿಂಸಾತ್ಮಕವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಆದ್ದರಿಂದ ಕೇಂದ್ರ ಸರ್ಕಾರ ಮಾತುಕತೆ ಮೂಲಕ ಮೇಲ್ಕಂಡ ಸಮಸ್ಯೆಯನ್ನು ಪರಿಹರಿಸಿ ರೈತ ಮುಖಂಡರ ಪ್ರಾಣ ಉಳಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ. ಇಲ್ಲವಾದಲ್ಲಿ ದೇಶಾದ್ಯಂತ ಚಳುವಳಿ ತೀವ್ರಗೊಳಿಸಲಾಗುವುದು ಎಂದು ರೈತ ಹೋರಾಟಗಾರರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ರಾಜ್ಯ ರೈತ ನಾಯಕರಾದ ಈಚಘಟ್ಟ ಸಿದ್ದವೀರಪ್ಪ, ಮರ್ಲಹಳ್ಳಿ ರವಿಕುಮಾರ್, ನಿರಂಜನಮೂರ್ತಿ, ಆಲೂರು ಸಿದ್ದರಾಮಣ್ಣ, ಕೆ.ಟಿ ತಿಪ್ಪೇಸ್ವಾಮಿ, ರಂಗಸ್ವಾಮಿ, ಚಂದ್ರಮೌಳಿ, ಹೊಳಲ್ಕೆರ ಪ್ರಸನ್ನ, ಬಿ.ರಂಗಪ್ಪಕೊಡಗವಳ್ಳಿ, ಎಂ.ಅಂಜನಮೂರ್ತಿ, ರಾಜಪ್ಪ, ಶಂಕ್ರಪ್ಪ ಸೇರಿದಂತೆ ಮತ್ತಿತರ ರೈತ ಮುಖಂಡರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.