ಕೇಂದ್ರ ಸರ್ಕಾರ ತಕ್ಷಣ ಸರ್ವ ಪಕ್ಷಗಳ ಸಭೆ ಕರೆಯಲಿ-ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರ ತಕ್ಷಣ ಸರ್ವಪಕ್ಷಗಳ ಸಭೆ ಕರೆದು ಭಯೋತ್ಪಾದನೆಯ ವಿರುದ್ಧ ಹೋರಾಡುವ ಸಂಬಂಧ ಚರ್ಚಿಸಬೇಕು. ಭಯೋತ್ಪಾದನೆ ದಮನ ಮಾಡಬೇಕಿದೆ. ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಉಗ್ರರ ದಾಳಿಗೆ ತೀವ್ರವಾಗಿ ಖಂಡಿಸಿದ ಅವರು ಕಾಂಗ್ರೆಸ್ ಪಕ್ಷ ಸಹ ಈ ಘಟನೆಯನ್ನು ಖಂಡಿಸಿದೆ. ಇದು ಅತ್ಯಂತ ವಿಷಾದಕರ ಘಟನೆ. ಉಗ್ರರು ಜೀವಗಳನ್ನು ಬಲಿ ಪಡೆದಿದ್ದಾರೆ. ಇದು ಆಘಾತದ ವಿಚಾರ. ದೇಶದ ಐಕ್ಯತೆಗೆ ಧಕ್ಕೆ ತರಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ವಪಕ್ಷಗಳ ಸಭೆ ಕರೆಯಬೇಕು. ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಪಡೆದು ಉಗ್ರರ ಮಟ್ಟ ಹಾಕಲು ಕಾರ್ಯಪ್ರವೃತ್ತರಾಗಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಭಯೋತ್ಪಾದನೆ ಇಲ್ಲಿಗೆ ಕೊನೆಯಾಗಬೇಕು. ಸಾವು, ನೋವುಗಳನ್ನು ತಡೆಯಬೇಕು ಎಂದು ಖರ್ಗೆ ಅವರು ಒತ್ತಾಯಿಸಿದರು.

ಉಗ್ರರ ದಾಳಿಯಿಂದ ಕುಟುಂಬಗಳಿಗೆ ತೊಂದರೆಯಾಗಿದೆ. ಉಗ್ರರ ದಾಳಿ ಘಟನೆ ವೈಯುಕ್ತಿಕವಾಗಿ ನೋವು ತಂದಿದೆ. ತಡೆಯಲಾರದಷ್ಟು ದುಃಖ ಅವರ ಕುಟುಂಬಕ್ಕೆ ಆಗಿದೆ. ಅವರ ಕುಟುಂಬದ ಹಿಂದೆ ನಾವು ನಿಲ್ಲುತ್ತೇವೆ. ನಮ್ಮ ದೇಶದಲ್ಲಿ ದೊಡ್ಡ ಆತಂಕವಿದೆ. ಜಮ್ಮು-ಕಾಶ್ಮೀರ ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಕೇಂದ್ರದ ಗೃಹ ಸಚಿವ ಅಮಿತ್ ಶಾ ಜತೆಯೂ ಮಾತನಾಡಿದ್ದೇನೆ. ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಸ್ಥಳೀಯ ಕಾಂಗ್ರೆಸ್ ನಾಯಕರ ಜತೆಯೂ ಚರ್ಚೆ ಮಾಡಿದ್ದೇನೆ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಅಮಿತ್ ಶಾ ಅವರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಭದ್ರತಾ ವೈಫಲ್ಯ, ಆ ವೈಫಲ್ಯ, ಈ ವೈಫಲ್ಯ ಎಂದು ಚರ್ಚಿಸುವ ಸಮಯವಲ್ಲ. ಇಡೀ ದೇಶ ಆಘಾತದಲ್ಲಿದೆ. ಎಲ್ಲರೂ ಒಂದಾಗಿ ಇದನ್ನು ಎದುರಿಸಬೇಕು. ಈಗ ತಪ್ಪುಗಳನ್ನು ಹುಡುಕುವ ಸಮಯ ಅಲ್ಲ. ಇದು ಸಹಕಾರ ನೀಡುವ ಸಮಯ ಎಂದು ಖರ್ಗೆ ತಿಳಿಸಿದರು.

 ಬೇಸಿಗೆ ಕಾಲ. ದೇಶದ ನಾನಾ ರಾಜ್ಯಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಜಮ್ಮು ಕಾಶ್ಮೀರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಪ್ರವಾಸಿಗರಿಂದಲೇ ಜಮ್ಮು-ಕಾಶ್ಮೀರದ ಜನರ ಜೀವನ ನಡೆಯಬೇಕು. ಉಮರ್ ಅಬ್ದುಲ್ಲಾ ಕೂಡಾ ಇದನ್ನೇ ಹೇಳಿದ್ದಾರೆ. ಇಂತಹ ಘಟನೆಗಳಿಂದ ಆಗುವ ಪರಿಣಾಮಗಳ ಬಗ್ಗೆಯೂ ಉಮರ್ ಅಬ್ದುಲ್ಲಾ ಮಾತನಾಡಿದ್ದಾರೆ. ರಾಜ್ಯದ ಪ್ರಭುತ್ವದ ಮೇಲಿನ ನೇರ ದಾಳಿ ಇದು. ನಾವೆಲ್ಲಾ ಇಂತಹ ಸಂದರ್ಭದಲ್ಲಿ ಒಂದಾಗಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಉಗ್ರರನ್ನು ಪತ್ತೆ ಹಚ್ಚಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಬೇಕು. ಇನ್ನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಕೂಡಾ ಆರಂಭವಾಗುತ್ತದೆ. ಈ ಘಟನೆ ಅಮರನಾಥ ಯಾತ್ರೆ ಮೇಲೂ ಪರಿಣಾಮ ಬೀರಬಹುದು. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಖರ್ಗೆ ಅವರು ಒತ್ತಾಯಿಸಿದರು.

ಹಲವು ಕಡೆಗಳಿಂದ ಪ್ರವಾಸಕ್ಕೆ ತೆರಳಿ ಉಗ್ರರ ದಾಳಿಯಿಂದ ಮಡಿದವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ. ಹತ್ಯೆಯಾದ ಮಂಜುನಾಥ್ ಶಿವಮೊಗ್ಗದವರು. ಅವರು ಬಿಗ್ ಬಿಲ್ಡರ್ ಆಗಿದ್ದವರು. ಭರತ್ ಭೂಷಣ್ ಬೆಂಗಳೂರಿನವರು. ಅವರು ಹಾವೇರಿ ಮೂಲದವರು. ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಲ್ಲಿಗೆ ತೆರಳಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಅಲ್ಲಿರುವ ಕನ್ನಡಿಗರನ್ನ ಕರೆತರುವ ಕೆಲಸ ಮಾಡುತ್ತಿದ್ದಾರೆ. ಮಂಜುನಾಥ್ ಪತ್ನಿ ಪಲ್ಲವಿ ಹಾಗೂ ಭರತ್ ಭೂಷಣ್ ಪತ್ನಿ ಜೊತೆ ಮಾತನಾಡಿ ಸಾಂತ್ವನ ಹೇಳಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಖರ್ಗೆ ಅವರು ಹೇಳಿದರು.

ಇಂದು ಕಾರ್ಯಕಾರಣಿ ಸಭೆ:
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯ ಸಭೆಯನ್ನು ಏ.24 ರಂದು ಕರೆದಿದೆ. ಸಭೆಯಲ್ಲಿ ನಾವು ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಖರ್ಗೆ ಅವರು ತಿಳಿಸಿದರು.

ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಮಾತನಾಡಿ, ಉಗ್ರರ ದಾಳಿಯಿಂದಾಗಿ ಭಾರತೀಯರೆಲ್ಲ ಶಾಕ್ ಆಗಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರು ಖಂಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಉಗ್ರರ ದಾಳಿಗೆ ಕಟುವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ
, ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಕಾಶ್ಮೀರದಲ್ಲಿನ ಉಗ್ರರ ದಾಳಿ ಇಡೀ ಪ್ರಪಂಚಕ್ಕೆ ದೊಡ್ಡ ಆಘಾತ. ಈ ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳನ್ನು ಸದೆಬಡಿಯಬೇಕು ಎಂದು ಹೇಳಿದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಜಾಗೃತವಾಗಿ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿಗಳು ಈ ವಿಚಾರ ತಿಳಿದ ಕೂಡಲೇ ತಕ್ಷಣವೇ ರಾಜ್ಯ ಸರ್ಕಾರದ ಪರವಾಗಿ ಸಚಿವ ಸಂತೋಷ ಲಾಡ್ ಅವರ ಮುಖಂಡತ್ವದಲ್ಲಿ ಒಂದು ತಂಡವನ್ನು ಕಳುಹಿಸಿದ್ದು ಆ ತಂಡದ ಸದಸ್ಯರು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದರು.

ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಈ ವಿಚಾರದಲ್ಲಿ ನಮ್ಮ ಪಕ್ಷ ಕೇಂದ್ರ ಸರ್ಕಾರದ ಪರ ನಿಲ್ಲುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರ ಈ ಭಯೋತ್ಪಾದಕರನ್ನು ಸದೆಬಡಿಯಬೇಕು. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಉಗ್ರ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರೂ ಬುಡಸಮೇತ ಕಿತ್ತೊಗೆಯಬೇಕು. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಡಿಸಿಎಂ ಶಿವಕುಮಾರ್ ಹೇಳಿದರು.

ಕೇಂದ್ರ ಸರ್ಕಾರ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು. ದಾಳಿಯಲ್ಲಿ ಸಾವನ್ನಪ್ಪಿರುವ ಮೃತರ ಕುಟುಂಬದವರ ಜತೆ ಚರ್ಚೆ ಮಾಡಿದೆ. ಶಿವಮೊಗ್ಗ ಜಿಲ್ಲಾ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದು, ಮೃತರ ಕುಟುಂಬದವರನ್ನು ಭೇಟಿ ಮಾಡುವಂತೆ ತಿಳಿಸಿದ್ದೇನೆ ಎಂದು ಡಿಸಿಎಂ ತಿಳಿಸಿದರು.

ಉಗ್ರರು ಧರ್ಮದ ಆಧಾರದ ಮೇಲೆ ಹತ್ಯೆ ಮಾಡಿರುವುದು ಇದೇ ಮೊದಲ ಬಾರಿಗೆ ನೋಡಿದ್ದೇನೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಆಘಾತವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಹೇಳಿದರು.

Share This Article
error: Content is protected !!
";