ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬಿಹಾರದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಾರಂಭಿಸಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಕ್ರಮವನ್ನು ಸುಪ್ರೀಂ ಕೋರ್ಟ್ ಟೀಕಿಸಿದ್ದು ಮತದಾರ ಪಟ್ಟಿಗಳ ವಿಶೇಷ ಪರಿಷ್ಕರಣೆಯ ಸಮಯದಲ್ಲಿ ನೀವು ಪೌರತ್ವದ ವಿಷಯವನ್ನು ಏಕೆ ತೆಗೆದುಕೊಂಡಿದ್ದೀರಿ, ಅದು ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆಯೇ ಹೊರತು ಚುನಾವಣಾ ಆಯೋಗದ ಅಡಿಯಲ್ಲ ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಹೇಳಿದೆ.
ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸ್ವೀಕೃತ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್‌ಗಳನ್ನು ಹೊರಗಿಡುವ ಬಗ್ಗೆ ಕೂಡ ಸುಪ್ರೀಂ ಕೋರ್ಟ್ ಪೀಠ ಕಳವಳ ವ್ಯಕ್ತಪಡಿಸಿದೆ. ದೇಶದ ನಾಗರಿಕರ ಗುರುತಿನ ಪುರಾವೆಯಾಗಿ ಆಧಾರ್ ನ್ನು ದೇಶಾದ್ಯಂತ ಬಳಸಲಾಗುತ್ತಿರುವುದರಿಂದ ಅದನ್ನು ಏಕೆ ಪರಿಗಣಿಸಲಾಗಿಲ್ಲ ಎಂಬುದರ ಕುರಿತು ತನ್ನ ನಿಲುವು ಸ್ಪಷ್ಟಪಡಿಸುವಂತೆ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಹಲವು ವಿರೋಧ ಪಕ್ಷದ ಸಂಸದರು ಸೇರಿದಂತೆ 10 ಕ್ಕೂ ಹೆಚ್ಚು ಅರ್ಜಿಗಳು ಚುನಾವಣಾ ಆಯೋಗದ ಆದೇಶ ರದ್ದುಗೊಳಿಸಲು ಒತ್ತಾಯಿಸಿವೆ. ಈ ಪ್ರಕ್ರಿಯೆಯನ್ನು ಪ್ರಶ್ನಿಸುವ ಅರ್ಜಿಗಳಿಗೆ ಪ್ರಾಥಮಿಕ ಆಕ್ಷೇಪಣೆಗಳಿವೆ. ಸಂವಿಧಾನಕ್ಕೆ ಅನುಗುಣವಾಗಿ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮುಂದೆ ತನ್ನ ಅಭಿಪ್ರಾಯ ಪ್ರತಿಪಾದಿಸಿದೆ.
2003ರಲ್ಲಿ ಕೊನೆಯ ಬಾರಿಗೆ ಇಂತಹ ಸಮಗ್ರ ಪರಿಷ್ಕರಣೆ ನಡೆಸಿದ್ದು ಪ್ರಸ್ತುತ ನವೀಕರಣವು ಸಕಾಲಿಕ ಮತ್ತು ಅಗತ್ಯವಾಗಿದೆ ಎಂದು ಚುನಾವಣಾ ಆಯೋಗ ಒತ್ತಿ ಹೇಳಿದೆ.