ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪಲಿ: ಟಿ.ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯ ಸರ್ಕಾರ ಪ್ರತಿಯೊಂದು ಯೋಜನೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಲೇಬೇಕು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಶನಿವಾರ ನಗರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಗರ್‌ಹುಕ್ಕುಂ, ನಗರ ಆಶ್ರಯ ಮತ್ತು ಆರಾಧನಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಗರ ಆಶ್ರಯ ಸಮಿತಿಗೆ ಸಂಬಂಧಿಸಿಂತೆ ಪೌರಾಯುಕ್ತ ಜಗರೆಡ್ಡಿಗೆ ಸೂಚನೆ ನೀಡಿದ ಶಾಸಕರು ನಗರ ಆಶ್ರಯ ಸಮಿತಿ ಸಭೆಯಲ್ಲಿ ಕೈಗೊಳ್ಳುವ ಎಲ್ಲಾ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನಿಮ್ಮದ್ದು. ಇದರಲ್ಲಿ ಲೋಪವಾದರೆ ಸಹಿಸುವುದಿಲ್ಲವೆಂದರು. ಪೌರಾಯುಕ್ತ ಜಗರೆಡ್ಡಿ ಮಾಹಿತಿ ನೀಡಿ ವಾಜಿಪೇಯಿ ವಸತಿ ಯೋಜನೆ ೭೧, ಅಂಬೇಡ್ಕರ್ ವಸತಿ ಯೋಜನೆಯಲ್ಲಿ ೨೪ ಅರ್ಜಿಗಳು ಈಗಾಗಲೇ ಎಲ್ಲಾ ದಾಖಲಾತಿಗಳೊಂದಿಗೆ ತಯಾರಿವೆ ಎಂದರು.

ಬಗರ್‌ಹುಕ್ಕುಂ ಸಮಿತಿ ಉದ್ದೇಶಿಸಿ ಮಾತನಾಡಿದ ಶಾಸಕ ಈಗಾಗಲೇ ತುರುವನೂರು ಹೋಬಳಿ ಮಟ್ಟದಲ್ಲಿ ೧೬, ನಗರ ಕಸಬಾದಲ್ಲಿ ೧೫ ಫಲಾನುಭವಿಗಳು ಈಗಾಗಲೇ ಸಮಿತಿಯಿಂದ ಶಿಫಾರಸ್ಸುಗೊಂಡಿದ್ದು ಕೂಡಲೇ ಅವರಿಗೆ ಸಾಗುವಳಿಚೀಟಿ ನೀಡುವಂತೆ ಸೂಚಿಸಿದರು. ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿದ್ದರೂ ಕೆಲವೊಂದು ಸಣ್ಣಪುಟ್ಟ ಲೋಪಗಳಿದ್ದರೆ ತಿರಸ್ಕರಿಸುವುದು ಬೇಡ. ಮತ್ತೊಮ್ಮೆ ಪರಿಶೀಲನೆ ನಡೆಸಿ ಸೂಕ್ತ ಫಲಾನುಭವಿ ಗುರುತಿಸಿ ಸೌಲಭ್ಯಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಆರಾಧನ ಸಮಿತಿ ಸದಸ್ಯರೊಂದಿಗೆ ಮಾತನಾಡಿದ ಅವರು, ೨೦೨೩-೨೪ನೇ ಸಾಲಿನಲ್ಲಿ ಈಗಾಗಲೇ ಫಲಾನುಘವಿಗಳನ್ನು ಗುರುತಿಸುವ ಕಾರ್ಯ ಮುಕ್ತಾಯಗೊಂಡಿದೆ. ಮತ್ತೊಮ್ಮೆ ಪರಿಶೀಲನೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದರು.

ಸಭೆಯಲ್ಲಿ ತಹಶೀಲ್ಧಾರ್ ರೇಹಾನ್‌ಪಾಷ, ಚಿತ್ರದುರ್ಗ ತಹಶೀಲ್ಧಾರ್ ನಾಗವೇಣಿ, ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸಮುದಾಯ ಅಧಿಕಾರಿ ಭೂತಣ್ಣ, ಲೋಕೋಪಯೋಗಿ ಇಂಜಿನಿಯರ್ ವಿಜಯಭಾಸ್ಕರ್, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಪರಿಶಿಷ್ಟ ಪಂಗಡಗಳ ಅಧಿಕಾರಿ ಶಿವರಾಜ್, ಸರ್ವೆ ಅಧಿಕಾರಿ ಬಾಬುರೆಡ್ಡಿ, ಬಿಸಿಎಂ ಅಧಿಕಾರಿ ರಮೇಶ್, ಶಿರಸ್ತೇದಾರ್ ಸದಾಶಿವಪ್ಪ, ಆರ್.ತಿಪ್ಪೇಸ್ವಾಮಿ, ಡಿ.ಪ್ರಕಾಶ್, ಸುಮಲತಾ, ಸಮಿತಿ ಸದಸ್ಯರಾದ ಯರ್ರಬಾಲಪ್ಪ, ಲಕ್ಷ್ಮಿದೇವಿ, ರಾಜಶೇಖರ್, ಜಿ.ಮಾರಪ್ಪ  ಮುಂತಾದವರು ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";