ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸ್ತುತ ರಾಜ್ಯದಲ್ಲಿ ಉದ್ಬಸಿರುವ ಅಧಿಕಾರ ಹಂಚಿಕೆ ಸೇರಿದಂತೆ ಇತರೆ ಎಲ್ಲ ರೀತಿಯ ಗೊಂದಲಗಳಿಗೆ ಹೈಕಮಾಂಡ್ ಅಂತ್ಯ ಹಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಶಾಸಕರ ಮತ್ತೊಂದು ತಂಡ ದೆಹಲಿಗೆ ಭೇಟಿ ನೀಡಿರುವ ಬಗ್ಗೆ ಕಾವೇರಿ ನಿವಾಸದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಹೈಕಮಾಂಡ್‌ರನ್ನು ಭೇಟಿ ಮಾಡಿ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಶಾಸಕರಿಗಿದೆ. ಪಕ್ಷದ ವರಿಷ್ಠರು ಏನು ಹೇಳುತ್ತಾರೆ ನೋಡೋಣ ಎಂದು ತಿಳಿಸಿದರು.
ಭೇಟಿ ಸದ್ಯಕ್ಕಿಲ್ಲ:
ಪಕ್ಷದ ವರಿಷ್ಠರು ಸಚಿವ ಸಂಪುಟ ವಿಸ್ತರಣೆ ಕುರಿತು ಸೂಚನೆ ನೀಡಿದಾಗ ಸಂಪುಟ ವಿಸ್ತರಣೆ ಕೈಗೊಳ್ಳಲಾಗುವುದು ಎಂದು ಸಿಎಂ ಅವರು ತಿಳಿಸಿ ಸದ್ಯಕ್ಕೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಇರಾದೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಿದೇಶಗಳಿಗೆ ನಂದಿನಿ ತುಪ್ಪ ರಫ್ತು: ಕರ್ನಾಟಕ ಹೆಮ್ಮೆಯ ನಂದಿನಿ ತುಪ್ಪು ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಸಿಎಂ ಅವರು ತಿಳಿಸಿದರು.
ಮೂಲತ: ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಜಿಲ್ಲೆಯವರಾದ ಕುಮಾರ ಎಂಬವರು ಇದರ ಏಜೆನ್ಸಿ ಪಡೆದಿದ್ದಾರೆ. ಕೆಎಂಎಫ್ ಹಾಗೂ ಕುಮಾರ ಅವರಿಗೆ ಶುಭವಾಗಲಿ ಎಂದು ಸಿದ್ದರಾಮಯ್ಯ ಆರೈಸಿದ್ದಾರೆ.

