ಶೇ.5ರಷ್ಟು ರಿಯಾಯಿತಿಯೊಂದಿಗೆ ಆಸ್ತಿ ತೆರಿಗೆ ಪಾವತಿ ಅವಧಿ ವಿಸ್ತರಣೆ ಮಾಡಲಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶೇ.5ರಷ್ಟು ರಿಯಾಯಿತಿಯೊಂದಿಗೆ ಆಸ್ತಿ ತೆರಿಗೆ ಪಾವತಿ ಅವಧಿ ವಿಸ್ತರಣೆ ಮಾಡಲಿ ಎಂದು ಎಲ್.ನಾರಾಯಣಾಚಾರ್, ವಕೀಲ, ಸಾಮಾಜಿಕ ಕಾರ್ಯಕರ್ತ
ಪಿ. ಲೀಲಾಧರ ಠಾಕೂರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಲು ಆಸ್ತಿಗಳು ಮಾಲೀಕರು ದಿನವೀಡಿ ಕಚೇರಿಗಳ ಮುಂದೆ ಕಾಯುತ್ತಿರುತ್ತಾರೆ. ಸರ್ವರ್ ಸಮಸ್ಯೆ ಸೇರಿದಂತೆ ಮತ್ತಿತರ ಕಾರಣಗಳಿಂದ ಆನ್ ಲೈನ್ ನಲ್ಲಿ ತೆರಿಗೆ ಪಾವತಿ ಆಗುವುದು ವಿಳಂಬ ಆಗುತ್ತಿದೆ.

ಇದರಿಂದ ಸಾಕಷ್ಟು ಆಸ್ತಿ ತೆರಿಗೆದಾರರು ಕಚೇರಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಅವಕಾಶ ನೀಡದಂತೆ ಜೂನ್-ಅಂತ್ಯದವರೆಗೆ ಶೇ.5ರಷ್ಟು ರಿಯಾಯಿತಿ ಸಹಿತ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ನಲ್ಲಿ ಆಯಾ ವರ್ಷದ ಆಸ್ತಿ ತೆರಿಗೆ ಪಾವತಿ ಶುರುವಾಗುತ್ತದೆ. ತೆರಿಗೆ ಪಾವತಿ ಮಾಡಲು ಏಪ್ರಿಲ್ ನಲ್ಲಿ ಶೇಕಡ 5 ರಷ್ಟು ರಿಯಾಯಿತಿ ಇರುವುದರಿಂದ ಬಹಳಷ್ಟು ಜನ ತೆರಿಗೆದಾರರುಗಳು ಈ ತಿಂಗಳಿನಲ್ಲಿ ತೆರಿಗೆ ಪಾವತಿಸಲು ಕ್ಯೂ ನಿಂತಿರುತ್ತಾರೆ.

ಏಪ್ರಿಲ್ ನಲ್ಲಿ 2ನೇ ಶನಿವಾರ, ಭಾನುವಾರ, ಸರ್ಕಾರಿ ರಜೆ ದಿನಗಳು ಮತ್ತು ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೆ, ಬಸವ ಜಯಂತಿ ಒಳಗೊಂಡಂತೆ ಅನೇಕ ಸರ್ಕಾರಿ ರಜೆಗಳು ಇರುತ್ತವೆ. ಏಪ್ರಿಲ್ ತಿಂಗಳಲ್ಲಿ  ಹೆಚ್ಚೆಂದರೆ 20 ಅಥವಾ 21 ದಿನಗಳು ಮಾತ್ರ ಕೆಲಸದ ದಿನಗಳಾಗಿರುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿರುತ್ತಾರೆ.

ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಿರುತ್ತದೆ. ಜನಸಂಖ್ಯೆಗೆ ತಕ್ಕಂತೆ ಮನೆ, ಮಠ, ವಾಣಿಜ್ಯ ಮಳಿಗೆಗಳು, ವೈದ್ಯಕೀಯ ಶಾಪ್ ಗಳು, ವಸತಿ ಗೃಹಗಳು ಸೇರಿದಂತೆ ಮತ್ತಿತರ ಆಸ್ತಿಗಳ ಸಂಖ್ಯೆ ಕೂಡಾ ಹೆಚ್ಚಿರುತ್ತದೆ. ಹಾಗಾಗಿ ಜೂನ್-ಅಂತ್ಯದವರೆಗೆ ರಿಯಾಯಿತಿ ದರದಲ್ಲಿ ತೆರಿಗೆ ಪಾವತಿಯ ಅವಧಿಯನ್ನು ವಿಸ್ತರಿಸಿದರೆ ತೆರಿಗೆದಾರರಿಗೆ ಅನುಕೂಲವಾಗುತ್ತದೆ.

ಸಾರ್ವಜನಿಕರು ಮತ್ತು ಆಸ್ತಿದಾರರ ಹಿತದೃಷ್ಠಿಯಿಂದ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ  ನಿರ್ದೇಶನಾಲವು ತುರ್ತು ನಿರ್ಧಾರ ಕೈಗೊಂಡು ಅವಧಿ ವಿಸ್ತರಣೆ ಮಾಡುವಂತೆ  ಸಾರ್ವಜನಿಕರ ಪರವಾಗಿ ಅವರುಗಳು ಮನವಿ ಮಾಡಿದ್ದಾರೆ.

 

Share This Article
error: Content is protected !!
";