ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ನೆರೆ ಸಂಕಷ್ಟಿತ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಲಿ-ಸೂಕ್ತ ತುರ್ತು ಪರಿಹಾರ ತಕ್ಷಣ ಘೋಷಿಸಲಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದರು.
ನೆರೆ ಪ್ರದೇಶಗಳ ಪ್ರವಾಸದ ಹಿನ್ನಲೆಯಲ್ಲಿ ಸೋಮವಾರ ಅವರು ಬೀದರ್ ದಕ್ಷಿಣ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳ ಮಳೆ ಹಾನಿಗೊಳಗಾದ ವಿವಿಧ ಭಾಗಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೇಳೆ ಹಾನಿ ಪರಿಶೀಲನೆ ನಡೆಸಿ ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ನೆರೆ ಹಾವಳಿಯ ಕುರಿತು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ರೈತ ಕಾಳಜಿ ಇಲ್ಲದ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಕರ ನೆರೆ ಹಾವಳಿಯಿಂದ ತತ್ತರ ಗೊಂಡಿರುವ ಸಂಕಷ್ಟಿತ ಜನರ ಹಾಗೂ ರೈತರ ನೆರವಿಗೆ ಧಾವಿಸದೆ ತಾತ್ಸಾರ ಧೋರಣೆ ಅನುಸರಿಸುತ್ತಿದೆ.
ಕಾಂಗ್ರೆಸ್ ಸರ್ಕಾರದ ಹೃದಯಹೀನ ನಡವಳಿಕೆಯ ಕಾರ್ಯವೈಖರಿ ದೃಶ್ಯಗಳು ಬೀದರ್ ಭಾಗದ ಪ್ರವಾಸದಲ್ಲಿ ಎದ್ದು ಕಂಡಿವೆ ಎಂದು ಅವರು ವಾಗ್ದಾಳಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಪ್ರಭು ಚೌಹಾಣ್, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಬೆಲ್ಲದ್, ಶಾಸಕ ಶರಣು, ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಮುಖಂಡ ಈಶ್ವರ್ ಸಿಂಗ್ ಠಾಕೂರ್, ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

