ದೇಶದ್ರೋಹದ ಕೃತ್ಯವೆಸಗಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡಲಿ

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಾಮಾಜಿಕ ಪರಿವರ್ತನೆಯ ಧ್ವನಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರವಿರುವ ನೀಲಿ ಬಾವುಟವನ್ನು ಚಿಕ್ಕಪ್ಪನಹಳ್ಳಿಯಲ್ಲಿ ೨೨ ದಿನಗಳ ಹಿಂದೆ ಸುಟ್ಟು ಸಂವಿಧಾನಕ್ಕೆ ಅಪಚಾರವೆಸಗಿರುವ ಬ್ರಾಹ್ಮಣ್ಯ ಪ್ರೇರಿತ ಮನಸ್ಸುಗಳ ವಿರುದ್ದ ಕಠಿಣ ಕ್ರಮ ಕೈಗೊಂಡು ದೇಶದ್ರೋಹದ ಕೃತ್ಯವೆಸಗಿರುವ ಕಿಡಿಗೇಡಿಗಳನ್ನು  ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಸಾಮಾಜಿಕ ಸಂಘರ್ಷ ಸಮಿತಿಯ ಪ್ರೊ.ಸಿ.ಕೆ.ಮಹೇಶ್ ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕಪ್ಪನಹಳ್ಳಿ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಕ್ಕೆ ಪೊಲೀಸರು ಅನುಮತಿ ನೀಡಿಲ್ಲದ ಕಾರಣ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಆದರೆ ಹೋರಾಟ ಮಾತ್ರ ನಿರಂತರವಾಗಿರುತ್ತದೆ. ಚಿಕ್ಕಪ್ಪನಹಳ್ಳಿಯಲ್ಲಿ ದಲಿತರ ಬದುಕು ಅಭದ್ರವಾಗಿದೆ.

- Advertisement - 

ಹಾಗಾಗಿ ಗ್ರಾಮಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು. ಅಂಬೇಡ್ಕರ್‌ಗೆ ಅವಮಾನಿಸಿರುವ ವ್ಯಕ್ತಿ ಮತ್ತವರ ಕುಟುಂಬಗಳು ಉಣ್ಣುತ್ತಿರುವ ಮೀಸಲಾತಿಯನ್ನು ತೆಗೆಯಬೇಕು.

ಬಾವುಟ ಸುಟ್ಟಿರುವ ದುರಳರಿಗೆ ಜಾಮೀನು ನೀಡಬಾರದು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡುವಂತೆ ಪ್ರೊ.ಸಿ.ಕೆ.ಮಹೇಶ್ ಆಗ್ರಹಿಸಿದರು.

- Advertisement - 

ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ ಹಿರೇಹಳ್ಳಿ ಮಾತನಾಡಿ ಬೆಳಗಾವಿಯಲ್ಲಿ ಸಮಾವೇಶ ಮಾಡುವ ಕಾಂಗ್ರೆಸ್, ಸಂವಿಧಾನವನ್ನು ಮುಂದಿಟ್ಟುಕೊಂಡು ಡೋಂಗಿತನ ಮಾಡುತ್ತಿರುವ ಬಿಜೆಪಿ. ಹಾಗೂ ಮನುವಾದಿಗಳ ಪರವಾಗಿರುವ ಸ್ವಾಮೀಜಿಯೊಬ್ಬರು ಚಿಕ್ಕಪ್ಪನಹಳ್ಳಿಯಲ್ಲಿ ಭಾವುಟ ಸುಟ್ಟಿರುವವರ ವಿರುದ್ದ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.?

ಎ.ಸಿ.ರೂಂನಲ್ಲಿ ಕೂರಲು ಅಲ್ಲ ಸ್ವಾಮೀಜಿ ಇರುವುದು. ಮಾದಿಗರಿಗೆ ರಕ್ಷಣೆ ಕೊಡಬೇಕು. ನಾವುಗಳು ಶಾಂತಿಯುತವಾಗಿ ನಡೆಸಲು ಉದ್ದೇಶಿಸಿದ್ದ ಕಾಲ್ನಡಿಗೆ ಜಾಥಕ್ಕೆ ಪೊಲೀಸರು ಅನುಮತಿ ಕೊಡದಿರುವುದರ ಹಿಂದೆ ವಿರೋಧಿ ಗುಂಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹನುಮಂತಪ್ಪ ದುರ್ಗಾ ಮಾತನಾಡುತ್ತ ಚಿಕ್ಕಪ್ಪನಹಳ್ಳಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಖಾವಿಧಾರಿ ರಾಜಕಾರಣಿಗಳು ಏಕೆ ಈ ಘಟನೆಯನ್ನು ವಿರೋಧಿಸುತ್ತಿಲ್ಲ. ಸಂವಿಧಾನದಡಿ ಟಿಕೆಟ್ ಪಡೆದು ಅಧಿಕಾರ ಅನುಭವಿಸುತ್ತಿರುವವರಿಗೆ ಕುರ್ಚಿಯೇ ಮುಖ್ಯಾನಾ ಎಂದು ಖಾರವಾಗಿ ಪ್ರಶ್ನಿಸಿದರು.? ನಮ್ಮ ಚಳುವಳಿ, ಹೋರಾಟ ನಿಲ್ಲುವುದಿಲ್ಲ ಎಂದು ಮನುವಾದಿಗಳಿಗೆ ಎಚ್ಚರಿಸಿದರು.
ದಲಿತ ಮುಖಂಡ ಬಿ.ರಾಜಣ್ಣ, ದುರುಗೇಶ್, ರಾಮುಗೋಸಾಯಿ, ಕೆ.ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

 

Share This Article
error: Content is protected !!
";