ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ನಡೆಯಲಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಹಿಳೆಯರ ಆಯ್ಕೆ ಮಾಡಬೇಕೆಂದು ಅನ್ನದ ಭಾಷೆ ಕನ್ನಡ ವೇದಿಕೆ ಆಗ್ರಹಿಸುತ್ತದೆ.
ಇದುವರೆಗೂ ನಡೆದಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹಿಂದೊಮ್ಮೆ ಮೌಖಿಕ ಸಾಹಿತ್ದ ಖನಿ, ನಾಡೋಜೆ, ಜಾನಪದ ಸಿರಿ ಸಿರಿಯಜ್ಜಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಆಗ್ರಹಗಳು ಕೇಳಿ ಬಂದಿದ್ದವಾದರೂ ಪರಿಗಣನೆ ಮಾಡಿರಲಿಲ್ಲ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಯರ ನಿರಾಕರಣೆ ಮಾಡಿಕೊಂಡು ಬಂದಿದೆ.
ಚಿತ್ರದುರ್ಗಜಿಲ್ಲೆಯಲ್ಲಿ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲಿ ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆಗಳ ಎತ್ತುವುದು, ಷರಾ ಬರೆಯುವುದು ಉಡಾಫೆಯಾಗುತ್ತದೆ. ಇದುವರೆಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವರರ ಪೈಕಿ ಕೆಲವರಿಗಿಂತ ಹೆಚ್ಚು ಕೃತಿಗಳ ಪ್ರಕಟಿಸಿದ, ಸಾಹಿತ್ಯ ಅಕಾಡೆಮೆ ಪ್ರಶಸ್ತಿಗಳ ಬಾಚಿದ ಮಹಿಳಾ ಲೇಖಕಿಯರು ಚಿತ್ರದುರ್ಗ ಜಿಲ್ಲೆಯಲ್ಲೂ ಇದ್ದಾರೆ ಎಂಬ ಹೆ್ಮ್ಮೆಗಳು ಸಾಹಿತ್ಯ ಪರಿಷತ್ ಕಡೆಯಿಂದ ಪ್ರಕಟವಾಗದೇ ಇರುವುದು ವಿಷಾಧದ ಸಂಗತಿ.
ವೈಜ್ಞಾನಿಕ ಲೇಖನ ಹಾಗೂ ಕೃತಿ, ಪ್ರವಾಸ ಕಥನಗಳ ಮೂಲಕ ವೈಚಾರಿಕತೆ ಸ್ಪಷ್ಟ ಜಾಡು ಮಾಡಿಕೊಟ್ಟಿರುವ ನೇಮಿಚಂದ್ರ ಮತ್ತು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಾಗೂ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದ ಸಂಧ್ಯಾರೆಡ್ಡಿ ಚಿತ್ರದುರ್ಗ ಜಿಲ್ಲೆಯವರೇ ಆಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೃಷಿ ಮಾಡುತ್ತಾ ಸಾಗಿದ್ದಾರೆ.
ಮಹಿಳಾ ಪ್ರಾತಿನಿಧ್ಯದ ಕೂಗು ಬಂದಾಗ ಪರಿಷತ್ತು ಇವರಿಬ್ಬರ ಪರಿಗಣನೆ ಮಾಡಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ದೃಷ್ಟಿ ದೋಷದಿಂದಾಗಿ ಪರಿಷತ್ತಿಗೆ ಸಾಧ್ಯವಾಗಿಲ್ಲವೆಂಬುದೇ ನೋವು ತರಿಸಿದೆ.
ಆದರೆ ಈ ಬಾರಿ ಹಾಗಾಗಬಾರದೆಂಬುದು ನಮ್ಮ ಹಕ್ಕೊತ್ತಾಯ. ಮಹಿಳೆಯರ ಸಮ್ಮಳನಾಧ್ಯಕ್ಷರಾಗಿ ಆಯ್ಕೆ ಮಾಡುವುದರ ಮೂಲಕ ಹೊಸ ಮಾದರಿಗೆ ಸಾಹಿತ್ಯ ಪರಿಷತ್ತು ಮುಂದಾಗಬೇಕೆಂದು ಅನ್ನದ ಭಾಷೆ ಕನ್ನಡ ವೇದಿಕೆ ಸಲಹೆ ಮಾಡುತ್ತದೆ.
ಜೆ.ಯಾದವರೆಡ್ಡಿ, ಸಂಗೇನಹಳ್ಳಿ ಅಶೋಕ್ ಕುಮಾರ್, ಶ.ಮಂಜುನಾಥ್, ಚಿಕ್ಕಪ್ಪನಹಳ್ಳಿ ಷಣ್ಮುಖ, ಸುಜಾತ ಸುದ್ದಿಗೋಷ್ಠಿಯಲ್ಲಿ ಇದ್ದರು.

