ಪೌರಕಾರ್ಮಿಕರಲ್ಲಿ ಭಗವಂತನನ್ನು ಕಾಣೋಣ, ಆರಾಧಿಸೋಣ…

News Desk

ಪೌರಕಾರ್ಮಿಕರಲ್ಲಿ ಭಗವಂತನನ್ನು ಕಾಣೋಣ, ಆರಾಧಿಸೋಣ…
ವರದಿ-ಆರ್.ಮಂಜುನಾಥ್, ಹರಿಹರ.

ಚಂದ್ರವಳ್ಳಿ ನ್ಯೂಸ್, ಹರಿಹರ:
ಜಗತ್ತಿನ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಲ್ಲಿ ಆ ಭಗವಂತ ನನ್ನು ಕಾಣೋಣ…ಎನ್ನುವ ದಿನ(ವಿಶೇಷ ವರದಿ: ಆರ್.ಮಂಜುನಾಥ್.)

ನೂರಾರು ವರ್ಷಗಳಿಂದ ಜಗತ್ತಿನ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರಲ್ಲಿ ಆ ಭಗವಂತನನ್ನು ಕಾಣೋಣ ಎನ್ನುವ ನುಡಿಯೊಂದಿಗೆ ಇಂದು ಸೆಪ್ಟೆಂಬರ್ 23 ಪೌರಕಾರ್ಮಿಕರ ದಿನಾಚರಣೆ ಆಚರಿಸುವ ಈ ದಿನದಂದು ಅವರಿಗೆ ಒಂದು ದೊಡ್ಡ ನಮನ ಸಲ್ಲಿಸೋಣ.

    ಪ್ರತಿ ವರ್ಷ ಮೇ ತಿಂಗಳ 1ನೇ ದಿನಾಂಕವನ್ನು ಕಾರ್ಮಿಕರ ದಿನಾಚರಣೆಯಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ ಆದರೆ ಸಾಮಾನ್ಯವಾಗಿ ಕಾರ್ಮಿಕರೆಂದರೆ ಶ್ರಮಿಕರು,ಶ್ರಮವಹಿಸಿ ಕೆಲಸ ಮಾಡುವಂಥವರು, ಕೈಗಾರಿಕೆಗಳಲ್ಲಿ, ಫ್ಯಾಕ್ಟರಿಗಳಲ್ಲಿ ಶ್ರಮಿಕ ಕೆಲಸ ಮಾಡುವ ಕೆಲಸಗಾರರು ಮಾತ್ರ ಕಾರ್ಮಿಕರೆಂದು ಇಡೀ ಜಗತ್ತು ಭಾವಿಸಿದೆ.

   ಆದರೆ ಪೌರಕಾರ್ಮಿಕರು ಎನ್ನುವ ಮತ್ತೊಂದು ಗುಂಪು ಇದೆ ಅದು ಸಣ್ಣ ಹಳ್ಳಿಯ ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಷ್ಟ್ರದ ರಾಜಧಾನಿ ದಿಲ್ಲಿಯ ಪಾರ್ಲಿಮೆಂಟ್ ವರೆಗೂ ಸ್ವಚ್ಛತೆಯ ಕೆಲಸವನ್ನು ನಿರ್ವಹಿಸುತ್ತಿದೆ. ಸೂಜಿಗವೆಂದರೆ ಇದನ್ನು ಸಾಮಾನ್ಯ ವಾಗಿ ಸಾಮಾನ್ಯ ಜನರಾದ ನಾವು ಯಾರೂ ಗಮನಿಸುತ್ತಿಲ್ಲ.

    ಇವರು ಗ್ರಾಮ ಪಂಚಾಯಿತಿ,ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ,ನಗರ ಪಾಲಿಕೆ, ಮಹಾನಗರ ಪಾಲಿಕೆ ಒಳಗೊಂಡಂತೆ ಸಾರಿಗೆ ಇಲಾಖೆ,ರೈಲ್ವೆ ಇಲಾಖೆ ಮತ್ತು ಇತರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿಯೂ ಸಹ ಕೆಲಸ ಮಾಡುತ್ತಿದ್ದಾರೆ ಇವರ ನೆನಪಿಗಾಗಿ ಸೆಪ್ಟೆಂಬರ್ 23 ರಂದು ಪೌರಕಾರ್ಮಿಕರ ದಿನವೆಂದು ಸರ್ಕಾರ ಘೋಷಣೆ ಮಾಡಿದೆ.ನಾಳೆ ಇವರು13ನೇ ವರ್ಷದ ಪೌರಕಾರ್ಮಿಕ ದಿನಾಚರಣೆಯನ್ನು ಅವರೆಲ್ಲರೂ ಆಚರಿಸುತ್ತಿದ್ದಾರೆ.

     ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಇವರು ಬೀದಿ ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾರೆ. ಮುನಿಸಿಪಲ್ ಮತ್ತು ಕೈಗಾರಿಕೆ ತ್ಯಾಜ್ಯಗಳನ್ನು ತೆಗೆಯುತ್ತಾರೆ. ಚರಂಡಿಗಳನ್ನು ಸ್ವಚ್ಚತೆ ಮಾಡುತ್ತಾರೆ ಜೊತೆಯಲ್ಲಿ ಕಚೇರಿ, ಆಸ್ಪತ್ರೆಗಳು, ಹೋಟೆಲ್‌ಗಳಲ್ಲಿ ,ಸಣ್ಣ ದೊಡ್ಡ ಕೈಗಾರಿಕೆಗಳು ಸೇರಿದಂತೆ ದೇಶದೆಲ್ಲೆಡೆ ಇರುವ ಶ್ರೀಮಂತರ ಮನೆಗಳಲ್ಲಿಯೂ ಸಹ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಅವರು ನಿರ್ವಹಿಸುವ ಕೆಲಸವೇನೆಂದರೆ ದಿನವೂ ಕೊಳಕು,ದುರ್ವಾಸನೆ ಮತ್ತು ಅಜಾಗರೂಕಥೆಯಿಂದ ಕೂಡಿದ ಮಾನವರು ಮಾಡಲಾಗದ ಅಸ್ತವ್ಯಸ್ತ ಸ್ಥಿತಿಯಲ್ಲಿದ್ದ ಪ್ರದೇಶವನ್ನು ಸ್ವಚ್ಛಗೊಳಿಸುವುದು.

     ಅತ್ಯಂತ ಕ್ಲಿಷ್ಟಕರವಾಗಿದ್ದ ಇವರ ಪರಿಸ್ಥಿತಿಯನ್ನು ಅರಿತಿದ್ದ ದಿ. ಐಪಿಡಿ ಸಾಲಪ್ಪನವರ ಮೂರು ದಶಕಗಳ ಹೋರಾಟ ಮಾಡಿದ ಫಲ ಮತ್ತು ಸಂಘಟಿತರಾಗಿ ಪರಿಣಾಮಕಾರಿಯಾಗಿ ಸರ್ಕಾರದ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಈಗ ಅವರಿಗೆ ವೇತನ ಮತ್ತು ಸೇವಾ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಇಷ್ಟೆಲ್ಲಾ ಆದರೂ ದೇಶದಲ್ಲಿ ಪೌರಕಾರ್ಮಿಕರ ಜೀವನಮಟ್ಟ ಇಂದಿಗೂ ಸುಧಾರಿಸಿಲ್ಲ ಅಧಿಕೃತ ಮೂಲಗಳ ಪ್ರಕಾರ ದೇಶದಲ್ಲಿ ಪೌರಕಾರ್ಮಿಕರುಗಳ ಸಂಖ್ಯೆ ಸುಮಾರು ದಶಲಕ್ಷ ಇರುವುದಾಗಿ ಮತ್ತು ಅನಧಿಕೃತವಾಗಿ ಇದಕ್ಕಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ.

  ಸುಸ್ಥಿತಿಗೆ ಬರಬೇಕಾಗಿದ್ದ ಪೌರಕಾರ್ಮಿಕರ ಜೀವನ ಜಾಗತೀಕರಣ ಹಿನ್ನೆಲೆಯಲ್ಲಿ ಅವರನ್ನು ವಸಾಹತು ಶಾಹಿ ಪೂರ್ವದ ಸ್ಥಿತಿಗೆ ತಂದು ನಿಲ್ಲಿಸಿದೆ. ಗುತ್ತಿಗೆ ಮತ್ತು ನೇರ ಪಾವತಿ ಪೌರಕಾರ್ಮಿಕರನ್ನಾಗಿ ನೇಮಕ ಮಾಡಿ ಅವರಿಗೆ ವೇತನ ಮತ್ತು ಸಾಮಾಜಿಕ ರಕ್ಷಣೆ ದೊರೆಯದಂತೆ ಮಾಡಿ ಅವರ ಜೀವನ ಶೈಲಿ ಮತ್ತೆ ಅದೋಗತಿಗೆ ಬಂದು ತಲುಪುವಂತೆ ಮಾಡಲಾಗುತ್ತಿದೆ.

    ಗುತ್ತಿಗೆ ಹೆಸರಿನಲ್ಲಿ ಪೌರಕಾರ್ಮಿಕರನ್ನು ಆಯ್ಕೆ ಮಾಡಿ ಅವರಿಗೆ ಯಾವುದೇ ನೆಲೆ ಇಲ್ಲದಂತೆ ಮಾಡಲಾಗುತ್ತಿದೆ ಒಂದು ಅಂದಾಜಿನ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 25,000ಕ್ಕೂ ಹೆಚ್ಚು ಪೌರಕಾರ್ಮಿಕರು ಮತ್ತು ರಾಜ್ಯದಾದ್ಯಂತ 45,000ಕ್ಕೂ ಹೆಚ್ಚಿನ ಗುತ್ತಿಗೆ ಪೌರ ಕಾರ್ಮಿಕರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.ಇವರನ್ನು ನಗರ ಸ್ವಚ್ಛತೆಯ ಹೆಸರಿನಲ್ಲಿ ಘನ ತ್ಯಾಜ್ಯ ವಿಲೇವಾರಿ (Said Waste Management) ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

   ಪೌರಕಾರ್ಮಿಕರು ಮತ್ತು ಗುತ್ತಿಗೆ ಪೌರಕಾರ್ಮಿಕರುಗಳ ನಡುವಿನ ವ್ಯತ್ಯಾಸವನ್ನು ನಿವಾರಿಸಲು ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ ಕಲಂ 25 (2)ರ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂದು ಕಾಯಿದೆ ಜಾರಿ ಇದ್ದರೂ ಸಹ ಅದನ್ನು ಯಾರು ಕೂಡ ಪಾಲನೆ ಮಾಡುತ್ತಿಲ್ಲ. ಅವರಿಗೆ ಕನಿಷ್ಠ ವೇತನ ದೊರೆಯುವುದು ಸಹ ದುರ್ಲಭವಾಗಿದೆ.

    ಇತ್ತೀಚೆಗೆ ಸರ್ಕಾರ 50;50ರ ಅನುಪಾತದಲ್ಲಿ ಗುತ್ತಿಗೆ ಮತ್ತು ನೇರ ಪಾವತಿ ಪೌರಕಾರ್ಮಿಕರನ್ನು ಖಾಯಂ ಗೊಳಿಸಲು ಆದೇಶ ಹೊರಡಿಸಿದೆ 50;50 ಅನುಪಾತ ಗ್ರಾಮೀಣ ಪ್ರದೇಶದಲ್ಲಿ ಫಲಪ್ರದ ವಾಗಬಹುದು ಆದರೆ ನಗರ ಪ್ರದೇಶದಲ್ಲಿ ಫಲಪ್ರದವಾಗಲು ಸಾಧ್ಯವಿಲ್ಲ ಏಕೆಂದರೆ ನಗರ ಪ್ರದೇಶದಲ್ಲಿ ಹೆಚ್ಚು ಕಸಕಡ್ಡಿ ಇರುತ್ತದೆ. ಅದರಂತೆ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತದೆ. ಆದರೆ ನಿಯಮದಂತೆ ನೂರು ಜನ ಕಾರ್ಮಿಕರಿಗೆ 50 ಜನರನ್ನು ಕಾಯಂಗಗೊಳಿಸಲಾಗುತ್ತಿದೆ.

     ಆದರೆ ಕಳೆದೆರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ನೇರ ಪಾವತಿ ಪೌರಕಾರ್ಮಿಕರನ್ನು 100 ;100 ಅನುಪಾತ ದಂತೆ ಪರಿಗಣಿಸಿ ಖಾಯಂ ಗೊಳಿಸುವ ಬಗ್ಗೆ ನಿರ್ಣಯವೊಂದನ್ನು ತೆಗೆದು ಕೊಳ್ಳಲಾಗಿದೆ ಎನ್ನುವ ಸಂತೋಷದ ಸುದ್ದಿಯೊಂದು ಬಂದಿದೆ.ಆದರೆ ಇದು ಕಾರ್ಯರೂಪಕ್ಕೆ ಬರಲು ಏನೇನು ಸಾಧಕ-ಬಾಧಕಗಳಿವೆ ಎಂಬುವುದು ಆದೇಶ ಹೊರಬಂದ ನಂತರವೇ ತಿಳಿದುಕೊಳ್ಳ ಬೇಕಾಗಿದೆ ಆದರೂ ಇದೊಂದು ಸಂತೋಷದ ಸುದ್ದಿ ಎಂದೇ ಹೇಳಬಹುದಾಗಿದೆ.

 ಪೌರಾಡಳಿತ ಇಲಾಖೆಯಲ್ಲಿ ಹೊರಗುತ್ತಿಗೆ ವ್ಯಾಪ್ತಿಯಲ್ಲಿರುವ ಒಳಚರಂಡಿ,ನೀರುಗಂಟಿ,ಲೋಡರ್-ಕ್ಲೀನರ್, ಸ್ಯಾನಿಟರಿ ಸೂಪರ್ವೈಸರ್, ವಾಹನ ಚಾಲಕರು ಇನ್ನು ಮುಂತಾದ ಹುದ್ದೆಗಳಿದ್ದು ಅವುಗಳನ್ನೆಲ್ಲ ನೇರ ಪಾವತಿ ವ್ಯಾಪ್ತಿಗೆ ತರಬೇಕೆಂಬ ಸಂಘದ ಬೇಡಿಕೆ ಇದ್ದು ಇದು ಶೀಘ್ರದಲ್ಲಿ ಈಡೇರುವ ನಿರೀಕ್ಷೆ ಇದೆ.

ಕೆಲವೇ ದಿನಗಳಲ್ಲಿ ಸರ್ಕಾರದಿಂದ ಸಂತೋಷದ ಸುದ್ದಿಯೊಂದು ಬರುವ ನಿರೀಕ್ಷೆ ಇದ್ದು ನೇರ ಪಾವತಿ ಸಿಬ್ಬಂದಿಗಳ ಖಾಯಮಾತಿ ಸಂದರ್ಭದಲ್ಲಿ ಶೇಕಡ 50ರಷ್ಟು ಅನುಪಾತದಲ್ಲಿ ಇದ್ದ ಆದೇಶವನ್ನು ಹಿಂಪಡೆದು ಶೇಕಡ ನೂರಕ್ಕೆ ನೂರರಷ್ಟು ನೇಮಕಾತಿ ಮಾಡಲು ಆದೇಶ ಹೊರಡಲಿದೆ ಎಂಬ ಸುದ್ದಿ ಇದ್ದು ಆದಷ್ಟು ಬೇಗನೆ ಹೊರ ಬರಲಿ ಎಂದು ನಮ್ಮ ಸಂಘ ಆಶಿಸುತ್ತಿದೆ.
ಎಂ.ಗುರುನಾಥ್, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ. 

 ನಮ್ಮ ಸಂಘದ ವತಿಯಿಂದ ನಗರಸಭೆ ನಿಧಿಯಿಂದ ಪೌರ ಕಾರ್ಮಿಕರು, ಹೊರಗುತ್ತಿಗೆ, ನೇರ ಪಾವತಿ ಪೌರಕಾರ್ಮಿಕರು ಸೇರಿ ದಂತೆ ಎಲ್ಲಾ ಹೊರಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ವಿಮೆಯನ್ನು ಮಾಡಿಸಬೇಕು ಎಂದು ಬೇಡಿಕೆ ಇದ್ದು ಇದು ಈಡೇರುವ ಭರವಸೆ ಇದೆ.

    ರಾಜ್ಯದ 30 ಜಿಲ್ಲೆಗಳಲ್ಲಿ ಪೌರಕಾರ್ಮಿಕರಿಗೆ ನಿವೇಶನ/ಮನೆ ನೀಡುವ ಬಗ್ಗೆ ಸರ್ಕಾರದ ಪ್ರಸ್ತಾವನೆ ಇದ್ದು ನಗರದ ಅಥವಾ ಕರ್ತವ್ಯ ನಿರ್ವಹಿಸುವ ಸ್ಥಳದಿಂದ 5 ಕಿಲೋಮೀಟರ್ ವ್ಯಾಪ್ತಿ ಯಲ್ಲಿ ಸರ್ಕಾರಿ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ನಿವೇಶನ/ಮನೆ ನೀಡುವ ಆದೇಶವಿದ್ದು ನಮ್ಮ ನಗರಸಭೆಯಿಂದ ಈಗಾಗಲೇ ಎಲ್ಲಾ ಪ್ರಕ್ರಿಯೆ ಮುಗಿದಿದ್ದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಪ್ಪಿಗೆ ನೀಡಿದ್ದು ಶೀಘ್ರದಲ್ಲಿ ನಿವೇಶನ ಮಂಜೂರಾತಿಯಾಗಲಿದೆ.
ಎಚ್.ರಮೇಶ್,ದಾವಣಗೆರೆ ಜಿಲ್ಲಾ ಅಧ್ಯಕ್ಷ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ.

       ಯಾವುದೇ ಪಟ್ಟಣ,ನಗರ ಸ್ವಚ್ಛವಾಗಿದೆ ಸುಂದರವಾಗಿದೆ ಎಂದರೆ ಅದಕ್ಕೆ ಪೌರಕಾರ್ಮಿಕರು ಕಾರಣ.ಅವರು ನಿಷ್ಠೆ ಹಾಗೂ ಬದ್ಧತೆಯ ಕೆಲಸ ಮಾಡಿದಾಗ ನಗರ ಸೌಂದರ್ಯವಾಗಿ ಕಾಣುತ್ತದೆ. ಅವರಿಂದಲೇ ನಮ್ಮ ಊರು ಪಟ್ಟಣ ನಗರಗಳು ಸುಂದರವಾಗಿ ಕಾಣುತ್ತವೆ ಅಂತಹ ಪೌರಕಾರ್ಮಿಕರ ದಿನವಾದ ಇಂದು ನಾವೆಲ್ಲರೂ ಅವರನ್ನು ಅದರ ಪೂರ್ವಕವಾಗಿ ಗೌರವಿಸೋಣ.
ಎಂ.ಜಂಬಣ್ಣ, ಉಪಾಧ್ಯಕ್ಷರು, ನಗರಸಭೆ, ಹರಿಹರ.

      “ಇತ್ತೀಚೆಗೆ ನಾನು ನಗರಸಭೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡ ನಂತರ ಪೌರಕಾರ್ಮಿಕರ ಕೆಲಸವನ್ನು ಗಮನಿಸುತ್ತಿದ್ದೇನೆ. ಅವರು ಬೆಳ್ಳಂ ಬೆಳಗ್ಗೆ ಆಗಮಿಸಿ ನಗರದ ಸ್ವಚ್ಛತೆ ಕಾರ್ಯದಲ್ಲಿ ಕಾರ್ಯಮಗ್ನರಗುವುದನ್ನು ನೋಡಿದಾಗ ಅವರ ಕೆಲಸ, ಅವರ ನಿಷ್ಠೆ, ಅವರ ಶ್ರಮ ಅರ್ಥವಾಗುತ್ತದೆ.

 ನನ್ನ ಅಧಿಕಾರವಧಿ ಮುಗಿಯುವದರೊಳಗೆ ಸರ್ಕಾರದಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಅವರಿಗೆ ತಲುಪಿಸುವಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಈ ಮೂಲಕ ಭರವಸೆ ನೀಡುವ ಜೊತೆಗೆ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯಗಳು ಸಹ ತಿಳಿಸುತ್ತೇನೆ.
ಕವಿತಾ ಮಾರುತಿ ಬೇಡರ್ಅಧ್ಯಕ್ಷರು, ನಗರಸಭೆ, ಹರಿಹರ.

 

 

 

- Advertisement -  - Advertisement - 
Share This Article
error: Content is protected !!
";