ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಾಸ ಶ್ರೇಷ್ಠ ಜಯಂತೋತ್ಸವ ನ.18ರಂದು ರಾಜ್ಯದಾದ್ಯಂತ ನಡೆಯಲಿದ್ದು, ದೊಡ್ಡಬಳ್ಳಾಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಡೆಯಲಿರುವ ಕನಕ ಜಯಂತೋತ್ಸವ ಪ್ರಯುಕ್ತ ತಾಲೂಕು ಕುರುಬರ ಸಂಘದ ವತಿಯಿಂದ ನಗರದ ಕನಕ ಭವನದಲ್ಲಿ ಪೂರ್ವಬಾವಿ ಸಭೆ ನಡೆಯಿತು.
ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಖಜಾಂಚಿ ಕೆ. ಎಂ. ಕೃಷ್ಣಮೂರ್ತಿ ಮಾತನಾಡಿ ದಾಸ ಶ್ರೇಷ್ಠ ಕನಕದಾಸರು ಬರೀ ಕುರುಬ ಸಮಾಜಕ್ಕೆ ಸೀಮಿತರಾಗದೆ ಸರ್ವ ಜನಾಂಗದ ಶೋಷಿತರ ದನಿಯಾಗಿದ್ದವರು. ಹೀಗಾಗಿ ತಾಲೂಕಿನ ಸರ್ವ ಸಮಾಜದ ಮುಖಂಡರ ಜೊತೆಗೆ ಕುರುಬ ಸಮಾಜದ ಯುವಕರನ್ನು, ಮುಖಂಡರನ್ನು ಒಗ್ಗೂಡಿಸುವುದರ ಜೊತೆಗೆ ಕುರುಬ ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಸೇರಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಿದೆ.
ಆದ್ದರಿಂದ ತಾಲೂಕಿನ ಗ್ರಾಮೀಣ ಹಾಗೂ ನಗರದ ಎಲ್ಲಾ ಬಂದುಗಳ ಜೊತೆಗೆ ಸಮಾಜದ ವಿವಿಧ ಸಂಘಟನೆಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯಕ್ರಮದ ರೂಪರೇಷೆ ಗಳನ್ನು ಮಾಡಬೇಕಿದೆ. ಅಂದು ತಾಲೂಕು ಆಡಳಿತದಿಂದ ನಡೆಯಲಿರುವ ಕನಕ ಜಯಂತೋತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು.
ನಂತರ ತಮ್ಮ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಬೇಕು. ತಾಲೂಕಿನ ಸಮಾಜದ ಯುವಕರು ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಕರೆತರುವ ಮೂಲಕ ಸಮುದಾಯದ ಸಂಘಟನೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಬೇಕು ಎಂದು ಕೃಷ್ಣಮೂರ್ತಿ ಹೇಳಿದರು.
ತಾಲೂಕು ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ ತಾಲೂಕಿನ ಸಾಸಲು, ಮದುರೆ, ಕಸಬಾ, ತೂಬಗೆರೆ, ಬೆಳವಂಗಲ ಹಾಗೂ ನಗರದ ಸಮಾಜದ ಎಲ್ಲರೂ ಒಗ್ಗೂಡಿ ಒಂದೇಕಡೆ ಕನಕ ಜಯಂತಿ ಆಚರಿಸುವುದರಿಂದ ಕಾರ್ಯಕ್ರಮಕ್ಕೆ ಮೆರುಗು ಬರುತ್ತದೆ.
ಎಲ್ಲಾ ಕಡೆ ಒಂದೇ ದಿನ ಕಾರ್ಯಕ್ರಮ ಆಚರಿಸುವುದರಿಂದ ಸಮಾಜದ ಎಲ್ಲರೂ ಒಗ್ಗೂಡಲು ಸಾಧ್ಯವಿಲ್ಲ. ಆದ್ದರಿಂದ ತಾಲೂಕಿನ ಮುಖಂಡರು ಹಾಗೂ ಯುವ ಸಂಘಟನೆಗಳು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು ತಾಲೂಕು ಆಡಳಿತ ಆಯೋಜಿಸುವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ರೈಲ್ವೇ ಸ್ಟೇಷನ್ ಮಲ್ಲೇಶ್ ಮಾತನಾಡಿ ಕನಕ ಜಯಂತೋತ್ಸವದಲ್ಲಿ ಭಾಗವಹಿಸುವುದರಿಂದ ಸಮಾಜದ ಎಲ್ಲರೂ ಒಗ್ಗೂಡುವಂತಾಗುತ್ತದೆ. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಇದರ ಜವಾಬ್ದಾರಿಯನ್ನು ತಾಲೂಕಿನ ಸಮಾಜದ ಎಲ್ಲಾ ಯುವಕರು ವಹಿಸಿಕೊಳ್ಳಬೇಕು. ನಮ್ಮಲ್ಲಿ ಏನೇ ಬಿನ್ನಾಭಿಪ್ರಾಯಗಳಿದ್ದರು ಬದಿಗಿಟ್ಟು ಕುರುಬರ ಸಂಘದ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಕುರುಬರ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಂಡೆ ನರಸಿಂಹ ಮೂರ್ತಿ, ಗೌರವಾಧ್ಯಕ್ಷ ತಿಮ್ಮೆಗೌಡ, ಖಜಾಂಚಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ನಾಗರಾಜ್, ಕಾರ್ಯದರ್ಶಿ ವೇಣುಗೋಪಾಲ, ಸಮಾಜ ಸೇವಕ ಹೊಸಹುಡ್ಯಾ ಮಲ್ಲೇಶ್, ನಗರಸಭಾ ಸದಸ್ಯ ಚಂದ್ರಮೋಹನ್, ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ಮಾರಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ರವಿಕುಮಾರ್, ಎಂ ಸಿ. ಮಂಜುನಾಥ್, ನೆಲಗುದಿಗೆ ಚಂದ್ರು, ಆಲಳ್ಳಿ ಚಂದ್ರು ಸೇರಿದಂತೆ ಸಮಾಜದ ಹಲವಾರು ಯುವ ಮುಖಂಡರು ಹಾಜರಿದ್ದರು.