ಚಂದ್ರವಳ್ಳಿ ನ್ಯೂಸ್, ಹಾವೇರಿ:
ಕೇಂದ್ರ ಸರ್ಕಾರದ ಜೊತೆ ಸುಮಧುರ ಬಾಂಧವ್ಯ ಹೊಂದಿದರೆ ರಾಜ್ಯದ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದ ಕರ್ನಾಟಕ ವೈಭವ; ವೈಚಾರಿಕ ಹಬ್ಬ ಸಮಾರೋಪ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಈ ಕಾರ್ಯಕ್ರಮ ಅರ್ಥಪೂರ್ಣ ಮತ್ತು ಸಕಾಲಿಕ. ರಾಜ್ಯದಲ್ಲಿ ನಿತ್ಯ ಸಂಘರ್ಷದ ಪದ ಬಳಕೆ ಮಾಡುತ್ತಿದ್ದಾರೆ. ಅದರಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಹಿಂದಿನ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆ ಯಾವ ರೀತಿ ನಡೆದುಕೊಂಡಿವೆ ಎನ್ನುವ ಕಟ್ಟುಪಾಡುಗಳಿವೆ, ಅದೇ ರೀತಿ ನಡೆದುಕೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಸೂಚ್ಯವಾಗಿ ಹೇಳಿದರು.
ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಮಾರ್ಗಸೂಚಿಗಳಿವೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆದುಕೊಳ್ಳುತ್ತಿದೆಯೇ ಹೊರತು, ಅದು ಹೊಸದಾಗಿ ರಾಜ್ಯದ ಜೊತೆ ಈ ರೀತಿ ನಡೆದುಕೊಳ್ಳುತ್ತಿಲ್ಲ. ಮಾರ್ಗಸೂಚಿ ಅರಿಯದೇ ಪ್ರಧಾನಿ ಮೋದಿ ಕಡೆ ಬೊಟ್ಟು ಮಾಡಿದರೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ಅನ್ಯಾಯವಾಗುತ್ತಿದೆ ಎಂದರೆ ಹೇಗೆ. ನಿಜವಾದ ಸಮಸ್ಯೆ ಎಲ್ಲಿ ಆಗುತ್ತಿದೆಯೆಂಬುದನ್ನು ಅರಿತು ನಡೆದುಕೊಳ್ಳಬೇಕು. ಕರ್ನಾಟಕದ ಯಾವ ರೀತಿಯ ಅಭಿವೃದ್ಧಿ ಕಾಣಬೇಕಾಗಿತ್ತೋ ಅದನ್ನು ಕಾಣದ ಪರಸ್ಥಿತಿ ಇದೆ. ಸಂವಿಧಾನವನ್ನು ಸಂಪೂರ್ಣ ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ಒಂದು ಪಕ್ಷದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಕೇವಲ ರಾಜಕೀಯ, ವೈಯಕ್ತಿಕ ಪಲಾಫೇಕ್ಷೆಗೆ ಈ ರೀತಿಯ ಅಪಪ್ರಚಾರ ನಡೆಸಲಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ ಕನ್ನಡ ಶ್ರೀಮಂತವಾದರೆ ಭಾರತವೂ ಶ್ರೀಮಂತವಾಗುತ್ತದೆ. ಇಷ್ಟೆಲ್ಲಾ ಶ್ರೀಮಂತವಾಗಿದ್ದರೂ ಸಹ ಭಾರತದಲ್ಲಿ ಅತಿ ಹೆಚ್ಚು ಸಾಲ ಮಾಡಿದ ರಾಜ್ಯ ಕರ್ನಾಟಕ ಎನ್ನುವುದು ದುರ್ದೈವ. ಕಳೆದ ಎರಡು ವರ್ಷಗಳಿಂದ ಪ್ರತಿವರ್ಷ ಒಂದು ಲಕ್ಷ ಐದು ಸಾವಿರ ಕೋಟಿ ರೂಪಾಯಿ ಸಾಲ ಮಾಡುತ್ತಿದ್ದೇವೆ. ಇಷ್ಟೆಲ್ಲಾ ಸಾಲ ಮಾಡಿದರೂ ರಾಜ್ಯದ ರೈತರು, ಕೂಲಿಕಾರ್ಮಿಕರು, ದಿನದಲಿತರು ಹಾಗೂ ಮಹಿಳೆಯರ ಜೀವನಮಟ್ಟ ಉತ್ತಮಗೊಂಡಿದೆಯಾ ಎಂದು ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದರು.
ರಾಜ್ಯದ ಸಂಪನ್ಮೂಲವು ವಿಕಸಿತ ಮಾಡುವ ಆಡಳಿತ ಯಂತ್ರಕ್ಕೆ ದೊರೆತಾಗ ಮಾತ್ರ ಆ ರಾಜ್ಯ ವೈಭವಗೊಳ್ಳುತ್ತದೆ. ವಿರಾಸತ್ ವಿಕಾಸತ್ ಎರಡೂ ಆಗಬೇಕು. ಕೇವಲ ಸರ್ಕಾರ ಶ್ರೀಮಂತವಾದರೆ ಸಾಲದು, ಜನರು ಶ್ರೀಮಂತವಾಗಬೇಕು. ಕೇಂದ್ರಕ್ಕೆ ದೂರದೃಷ್ಟಿಯ ಸರ್ಕಾರ ಸಿಕ್ಕಂತೆ, ರಾಜ್ಯಕ್ಕೂ ಸಹ ದೂರದೃಷ್ಟಿ ಇರುವ ಸರ್ಕಾರ ಇರಬೇಕು. ಆಗ ಕರ್ನಾಟಕ ವೈಭವವಾಗುತ್ತದೆ. ಆ ದಿನಗಳು ಬೇಗ ಬರಲಿ, ಕರ್ನಾಟಕ ವೈಭವವಾಗಲಿ ಎಂದು ಬೊಮ್ಮಾಯಿ ಆಶಿಸಿದರು.
ಹರಿಹರದ ಶ್ರೀ ಪಂಚಮಸಾಲಿ ಗುರುಪೀಠದ ಪರಮಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಖ್ಯಾತ ಹಿಂದೂಸ್ತಾನಿ ವಿದ್ವಾಂಸರಾದ ಸಂಗೀತಾ ಕಟ್ಟಿ ಅವರಿಗೆ ಸರ್ವಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತೆ ಮಂಜಮ್ಮ ಜೋಗತಿ, ಪ್ರಜ್ಞಾವಾಹದ ಸಂಯೋಜಕ ರಘುನಂದನ, ಪರಿವರ್ತನ ಸಂಘಟನೆಯ ಡಾ. ನಾರಾಯಣ ಪವಾರ, ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗೇಟಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.