ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಮೆಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕಿನ ವೇಗ ನೀಡಲು ರಾಜ್ಯ ಸರ್ಕಾರವ ಎಚ್ಚರಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮನವಿ ಮಾಡಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಹಾಗೂ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಗೌರವಿಸಿ ಮಾತನಾಡಿದ ಅವರು ಅನುದಾನ ಕೊರತೆ ಕಾರಣಕ್ಕೆ ಕಾಮಗಾರಿ ಕುಂಠಿತ ಗೊಂಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭದ್ರಾ ಮೇಲ್ದಂಡೆ ಬಗ್ಗೆ ಉದಾಸೀನ ತೋರಿವೆ. ಇತ್ಚೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯಾಗಿದ್ದ ಸಿಎಂ ಸಿದ್ದರಾಮಯ್ಯ ಕೇವಲ ಕೃಷ್ಣಾ ಮೇಲ್ದಂಡೆ ಬಗ್ಗೆ ಮಾತ್ರ ಚರ್ಚಿಸಿದ್ದಾರೆ, ಭದ್ರಾ ಮೇಲ್ದಂಡೆಗೆ ಅನುದಾನ ಕೋರುವ ಮಾತನಾಡಿಲ್ಲವೆಂದು ಆಪಾದಿಸಿದರು.
ಬಯಲು ಸೀಮೆ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರದುರ್ಗದ ಪತ್ರಕರ್ತರು ಹೋರಾಟ ಕಟ್ಟಿ 27 ವರ್ಷಗಳು ಸಂದಿವೆ. ಬೇರೆ ಯಾವ ಜಿಲ್ಲೆಗಳಲ್ಲಿಯೂ ಈತರಹದ ಹೋರಾಟಗಳು ದಾಖಲಾಗಿಲ್ಲ. ತಾವೇ ಕಟ್ಟಿದ ಹೋರಾಟಕ್ಕೆ ನಿರ್ಣಾಯಕ ಹಂತಕ್ಕೆ ಪತ್ರಕರ್ತರು ಕೊಂಡೊಯ್ಯಬೇಕು. ಜಿಲ್ಲೆಯ ಜನರ ಬಹುದಿನಗಳ ಕನಸು ಸಾಕಾರಕ್ಕೆ ಒತ್ತಾಸೆಯಾಗಿ ನಿಲ್ಲಬೇಕೆಂದು ಲಿಂಗಾರೆಡ್ಡಿ ಮನವಿ ಮಾಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಜಿಲ್ಲೆಯ ರೈತಾಪಿ ಜನರ ಸಮಸ್ಯೆಗಳಿಗೆ ಮೊದಲಿನಿಂದಲೂ ಜಿಲ್ಲೆಯ ಪತ್ರಕರ್ತರು ದನಿಯಾಗಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಅವರ ಕೊಡುಗೆ ಅಪಾರ. ವಿವಿ ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿಯಲು ಅವರೇ ಕಾರಣರಾಗಿದ್ದಾರೆ. ಭದ್ರಾ ನೀರು ವಿವಿ ಸಾಗರ ಭರ್ತಿಯಾಗಿಸಿ ಚಳ್ಳಕೆರೆ ತಾಲೂಕಿನ ಎಲ್ಲ ಬ್ಯಾರೇಜುಗಳ ತುಂಬಿಸಿ ಅಂದ್ರ ಪ್ರದೇಶದ ಬೋರನತಿಪ್ಪ ಜಲಾಶಯಕ್ಕೆ ಹರಿದು ಹೋಗಿದೆ. ಇನ್ನೊಂದು ವರ್ಷ ಜನ ಜಾನುವಾರುಗಳಿಗೆ ಕುಡಿವ ನೀರಿನ ಬಾಧೆ ಕಾಣಿಸದು ಎಂದರು.
ಸರ್ವೋದಯ ಕರ್ನಾಟಕದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಅನೇಕ ಜ್ವಲಂತ ಸಮಸ್ಯೆಗಳಿಂದ ನಲುಗಿದೆ.
ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವ ಹಿಂದಿನಿಂದಲೂ ಚಿತ್ರದುರ್ಗದ ಪತ್ರಕರ್ತರು ಮಾಡಿದ್ದು ಮುಂದೆಯೂ ತಮ್ಮ ಬದ್ದತೆ ಪ್ರದರ್ಶಿಸಬೇಕೆಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ರೈತರ ಹಲವು ಸಮಸ್ಯೆಗಳಿಗೆ ಚಿತ್ರದುರ್ಗದ ಪತ್ರಕರ್ತರು ದನಿಯಾಗಿ ನಿವಾರಣೆ ಮಾಡಿದ್ದಾರೆ. ನೀರಾವರಿ ಹೋರಾಟ ಕಟ್ಟಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸಂಘದ ನೂತನ ಪದಾಧಿಕಾರಿಗಳು ಮತ್ತಷ್ಟು ಚುರುಕಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ನೀರಾವರಿ ಅನುಷ್ಶಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ, ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಎನ್.ಅಹೋಬಲಪತಿ,
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಜು, ಸಂಘದ ಮಾಜಿ ಅಧ್ಯಕ್ಷ ದಿನೇಶ್ ಗೌಡಗೆರೆ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿದರು.
ರೈತ ಸಂಘದ ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಮಲ್ಲಾಪುರ ತಿಪ್ಪೇಸ್ವಾಮಿ, ರೇವಣ್ಣ, ಕನ್ನಡ ಕಾವಲು ಸಮಿತಿ ಸದಸ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

