ಲಿಂಗಾಯಿತ ಪ್ರತ್ಯೇಕ ಧರ್ಮ, ಬಸವ ಧರ್ಮ ಕನ್ನಡ ಧರ್ಮ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನ-2025ರ ಸಮಾರೋಪದಲ್ಲಿ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಸೇರಿ ಐದು ನಿರ್ಣಯ ಕೈಗೊಳ್ಳಲಾಗಿದೆ.

ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮುದಾಯದ ಸುಮಾರು ಸಾವಿರಾರು ಮಂದಿ ಭಾಗವಹಿಸಿದ್ದರು.
5 ನಿರ್ಣಯಗಳು-

- Advertisement - 

ಲಿಂಗಾಯತರು ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.

12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಬಸವಾದಿ ಶರಣರು ಸೇರಿ ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.

- Advertisement - 

ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳ ನಿಜಧರ್ಮ ಲಿಂಗಾಯತ ಧರ್ಮ. ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭುದ್ಯಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.

ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು. ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು. ಈ ಐದು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ನಮ್ಮದು ಲಿಂಗಾಯತ ಧರ್ಮ, ಬಸವ ಧರ್ಮ. ನಾವು ಬೇರೆಯವರನ್ನು ಟೀಕೆ ಮಾಡಲ್ಲ. ನಮ್ಮ ಧರ್ಮ ಪ್ರಸಾರ ಆಗಬೇಕು. ಬಸವ ಧರ್ಮ ಕನ್ನಡ ಧರ್ಮ. ಈ ಧರ್ಮದ ಪ್ರಸಾರ ಹೆಚ್ಚು ಆಗಬೇಕು. ನಾವು ಭಾರತೀಯರು, ಭೌಗೋಳಿಕವಾಗಿ ನಾವು ಹಿಂದೂಗಳು. ಆದರೆ ಧರ್ಮವಾಗಿ ನಮ್ಮದು ಬಸವ ಧರ್ಮ, ಲಿಂಗಾಯತ ಧರ್ಮ. ಯಾರನ್ನೂ ಟೀಕೆ ಮಾಡಲು ನಾವು ಹೋಗಲ್ಲ ಎಂದು ತಿಳಿಸಿದರು.

ಧರ್ಮದ ಮಾನ್ಯತೆಗೆ ಒತ್ತಾಯ:
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ
, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅನುಭವ ಮಂಟಪದಲ್ಲಿ ಮುದ್ರೆ ಬಿದ್ದಿತ್ತು. ಅದಾದ ನಂತರ ಸರ್ಕಾರದಲ್ಲಿ ಬಸವ ಧರ್ಮ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದವರು ಸಿದ್ದರಾಮಯ್ಯ. ಬಸವಣ್ಣನ ಚರಿತ್ರೆ ಎಲ್ಲಿವರೆಗೆ ಇರುತ್ತೋ ಅಲ್ಲಿವರೆಗೂ ಸಿದ್ದರಾಮಯ್ಯ ಹೆಸರು ಅಜರಾಮರ. ನಾಗಮೋಹನ್‌ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವಚನ ಸ್ವತಂತ್ರ ಧರ್ಮದ ಮುದ್ರೆ ಒತ್ತಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅದು ಇಂದಲ್ಲಾ ನಾಳೆ ಅಂಗೀಕಾರ ಆಗುತ್ತದೆ ಎಂದು ತಿಳಿಸಿದರು.

ನಿಜಲಿಂಗಪ್ಪನವರ ರೀತಿ ಸಿದ್ದರಾಮಯ್ಯ ಕಳಂಕರಹಿತ ರಾಜಕಾರಣಿ. ಅನುಭವ ಮಂಟಪ ಸ್ಥಾವರ, ಅಲ್ಲಿ ಜಂಗಮತ್ವ ಬೆಳೆಯಬೇಕು ಅಂದರೆ ವಚನ ವಿವಿ ಆರಂಭಿಸಬೇಕು. ಜನಪದ, ಸಂಸ್ಕೃತ, ಸಂಗೀತ ವಿವಿಗಳ ಮಾದರಿಯಲ್ಲಿ ವಚನ ವಿವಿ ಸ್ಥಾಪಿಸಿ ಅಲ್ಲಿ ಸಂಶೋಧನೆ, ಚಿಂತನೆ ನಡೆಯಬೇಕು. ವಚನ ವಿವಿ ಸ್ಥಾಪಿಸಿದರೆ ಇನ್ನೊಂದು ಇತಿಹಾಸ ಸೃಷ್ಟಿಯಾಗುತ್ತದೆ. ಶರಣರನ್ನು ಪುರೋಹಿತ ಶಾಹಿಗಳು ಕೊಲೆ ಮಾಡಿದ್ದಾರೆ. ಅವರ ತ್ಯಾಗ ಬಲಿದಾನಕ್ಕೆ ಬೆಲೆ ತರಬೇಕಾದರೆ ವಚನ ವಿವಿ ಸ್ಥಾಪಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಜಯವಾಗಬೇಕು. ಬಸವ ಸಂಸ್ಕೃತಿ ಅಭಿಯಾನಕ್ಕೆ ಮುಳ್ಳಾಗಿದ್ದವರು ನಮ್ಮ ಸಮಾಜದಲ್ಲಿಯೇ ಹುಟ್ಟಿದ ಮಠಾಧಿಪತಿಗಳು. ಬಸವಣ್ಣನವರನ್ನು‌ನಂಬಿದವರು ಕೆಟ್ಟಿಲ್ಲ. ಕೆಟ್ಟವರು ಬಸವಣ್ಣನ ನಂಬಿಲ್ಲ. ಯಂತ್ರ ತಂತ್ರ ಮಂತ್ರ ಮೂಢನಂಬಿಕೆ ಬೆಳೆಸುವ ಮಠಾಧಿಪತಿಗಳಿಗಾಗಿ ಬಸವಣ್ಣ ಹುಟ್ಟಿದ್ದಲ್ಲ. 21ನೇ ಶತಮಾನದಲ್ಲಿಯೇ ಬಸವ ತತ್ವಕ್ಕೆ ಇಷ್ಟು ತೊಂದರೆ ಇರುವಾಗ ಅವತ್ತು ಬಸವಣ್ಣನಿಗೆ ಎಷ್ಟು ತೊಂದರೆ ಆಗಿರಬಹುದು?. ಬಹಳ ಜನರಿಗೆ ಬಸವಣ್ಣ ಅಂದ್ರೆ ಅಲರ್ಜಿ. ಬಸವಣ್ಣನವರನ್ನು ಕೆಲವರು ಕರಿಬೇವು ಸೊಪ್ಪು ಮಾಡಿಕೊಂಡಿದ್ದಾರೆ. ಮಠಾಧಿಪತಿಗಳು ಬಸವಣ್ಣನ‌ಒಪ್ಪದಿದ್ದರೆ ಭಕ್ತರೇ ಮಠಾಧಿಪತಿಗಳ ದೂರ ಇಡುತ್ತಾರೆ. ಭಾರತೀಯ ಸಂಸ್ಕೃತಿಯ ಒಳಗೆ ಬಸವ ಸಂಸ್ಕೃತಿ ಭಿನ್ನವಾಗಿದೆ. ಮಠಾಧಿಪತಿಗಳ ಒಕ್ಕೂಟವನ್ನು ನಾವು ಉಳಿಸಿ ಬೆಳೆಸಬೇಕು. ನಮ್ಮ ಧರ್ಮಗುರು ಬಸವಣ್ಣ, ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ, ಕಲ್ಯಾಣ ರಾಜ್ಯವೇ ನಮ್ಮ ಗುರಿ ಎಂದು ಸ್ವಾಮೀಜಿ ತಿಳಿಸಿದರು.

ವಿಶ್ರಾಂತ ನ್ಯಾ.ನಾಗಮೋಹನದಾಸ್ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ಸಿಗುವವರೆಗೂ ಹೋರಾಟ ಮುಂದುವರೆಯಬೇಕು. ಶತ್ರುಗಳು ಯಾರು ಮಿತ್ರರು ಯಾರು ಅಂತಾ ನಾವೇ ಕಂಡುಕೊಳ್ಳಬೇಕು. ಶತ್ರುಗಳನ್ನು ಹೊರಗಡೆ ಇಟ್ಟು, ಮಿತ್ರರ ಜೊತೆ ಹೋರಾಟ ಮಾಡಬೇಕು. ಆಗ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವಾಗಿ ಘೋಷಣೆ ಮಾಡಬೇಕು. ಅಲ್ಪಸಂಖ್ಯಾತ ಸ್ಥಾನ ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಬೇಕು ಎಂದು ಒತ್ತಾಯಿಸಿದರು.‌

ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಲಬುರಗಿ ವಿವಿಗೆ ಬಸವಣ್ಣನ ಹೆಸರು, ಕಲಬುರಗಿ ಕೇಂದ್ರೀಯ ವಿವಿಗೆ ಅಂಬೇಡ್ಕರ್ ಹೆಸರಿಡಬೇಕು. ಬೆಂಗಳೂರಿನಲ್ಲಿ ಕೆಂಪೇಗೌಡರ ಹೆಸರಲ್ಲಿ ಏರ್‌ಪೋರ್ಟ್, ಸಂಗೊಳ್ಳಿ ರಾಯಣ್ಣ ಹೆಸರಲ್ಲಿ ರೈಲು ನಿಲ್ದಾಣ ಇದೆ. ಬಸವಣ್ಣನ ಹೆಸರನ್ನು ನಮ್ಮ ಮೆಟ್ರೋಗೆ ಇಡಬೇಕು. ಬೆಂಗಳೂರಿನಲ್ಲಿ ಬಸವಣ್ಣ ಹೆಸರು ಸ್ಮರಿಸಲು ಇದು ಅಗತ್ಯ ಎಂದು ಮನವಿ ಮಾಡಿದರು.‌

 

Share This Article
error: Content is protected !!
";