ಲಿಂಗಾಯತ, ಒಕ್ಕಲಿಗ, ದಲಿತರಿಗೆ ಜಾತಿ ಗಣತಿಯಲ್ಲಿ ಪಂಗನಾಮ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾತಿ ಗಣತಿ ವರದಿಯ ಮೂಲಕ ಲಿಂಗಾಯತರು
, ಒಕ್ಕಲಿಗರು, ದಲಿತರಿಗೆ ಪಂಗನಾಮ ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಜಾತಿ ಜನಗಣತಿ ವರದಿ ಕುರಿತು ಮಾತನಾಡಿದ ಅವರು, ಕಾಂತರಾಜು ಅವರನ್ನು ಮನೆಗೆ ಕರೆಸಿಕೊಂಡು ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ಬರೆಸಿದ ವರದಿ ಇದು. ಈ ವರದಿಯಲ್ಲಿ ಸೀಕ್ರೆಟ್ ಏನೂ ಇಲ್ಲ, ಎಲ್ಲ ಜಗಜ್ಜಾಹೀರಾಗಿದೆ. ಜಾತಿ, ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆಯುವ ವರದಿ. ಜನರನ್ನು ಕೂಡಿಸೋದು ಕಷ್ಟ, ಒಡೆಯೋದು ಸುಲಭ. ಸಿದ್ದರಾಮಯ್ಯ ಒಡೆಯುವುದರಲ್ಲಿ ಎಕ್ಸ್‌ಪರ್ಟ್. ಜಾತಿ, ಧರ್ಮಗಳ ಮಧ್ಯೆ ಒಡಕು ತರ್ತಿದ್ದಾರೆ. ಇದು ಸಿದ್ದರಾಮಯ್ಯ ಪ್ರಾಯೋಜಕತ್ವದ ಅವೈಜ್ಞಾನಿಕ ವರದಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಸಂದರ್ಭದಲ್ಲಿ ಕೋಟ್ಯಂತರ ಮನೆಗಳಿಗೆ ಭೇಟಿ ಮಾಡದೇ ಅವೈಜ್ಞಾನಿಕವಾದ ವರದಿ ಕೊಟ್ಟಿದ್ದಾರೆ. ಮನೆಗಳ ಸಮೀಕ್ಷೆ ಮಾಡದೇ ಹೇಗೆ ವರದಿ ಮಾಡಿದ್ರು?.

ವೀರಶೈವ ಲಿಂಗಾಯತರನ್ನು ಭಾಗ ಮಾಡಿದ್ರು. ಮುಸ್ಲಿಮರನ್ನು ಫೋಕಸ್ ಮಾಡಲಾಗಿದೆ. ಇದರಿಂದ ಏನು ಸಂದೇಶ ಕೊಡ್ತೀರಿ. ನೆಹರೂ ಅವರೂ ಇದೇ ತಪ್ಪು ಮಾಡಿದ್ರು, ಅಂಬೇಡ್ಕರ್ ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಿದ್ರು. ಲಿಂಗಾಯತರು, ಒಕ್ಕಲಿಗರನ್ನ ಮಾತ್ರ ವಿಭಜಿಸಿದ್ದೀರಿ. ನಿಮಗೆ ಬೇಕಿರುವ ಮುಸ್ಲಿಮ ಸಮುದಾಯವನ್ನು ವಿಭಜಿಸಲಿಲ್ಲ. ಜಾತಿ ಜನ ಗಣತಿ ವರದಿಗೆ 150 ಕೋಟಿ ಖರ್ಚು ಮಾಡಿದ್ದೇವೆ ಅಂತಿದ್ದಾರೆ, ಇದೇ ಬೋಗಸ್. ಶಾಮನೂರು ಶಿವಶಂಕರಪ್ಪ ನವರೇ ನಮ್ಮನೆಗೆ ಬಂದು ಸಮೀಕ್ಷೆ ಮಾಡಿಲ್ಲ ಅಂದ್ರು. ಹಾಗಾದ್ರೆ 150 ಕೋಟಿ ಹೊಡೆದವ್ರು ಯಾರು?. 150 ಕೋಟಿ ಲೂಟಿ ಆಗಿದೆ, ಇದು ಯಾರ ಜೇಬಿಗೆ ಹೋಯ್ತು ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.

ಕಾಂತರಾಜು ಸೈನ್ ಹಾಕದೇ ತಪ್ಪಿಸಿಕೊಂಡು ಓಡಿ ಹೋಗಿದ್ದೇಕೆ?. ಮುಸ್ಲಿಮರನ್ನು ಓಲೈಕೆ ಮಾಡುವ ವರದಿ ಇದು. ಅವರನ್ನು ಶಾಶ್ವತವಾಗಿ ವೋಟ್ ಬ್ಯಾಂಕ್ ಮಾಡಿಕೊಳ್ಳುವ ವರದಿ ಇದು. ಈ ವರದಿ ಗೊಂದಲದ ಗೂಡಾಗಿದೆ, ಯಾರಿಗೂ ನಂಬಿಕೆ ಇಲ್ಲ. ಸಿದ್ದರಾಮಯ್ಯ ಕೈಚಳಕದಿಂದ ಮಾಡಿರುವ ವರದಿ ಇದು. ಈಗಲೂ ಸರ್ಕಾರಕ್ಕೆ ಬುದ್ದಿ ಏನಾದ್ರೂ ಇದ್ರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಪ್ರತೀ ಮನೆಗೆ ಹೋಗಿ ವರದಿ ಕೊಡಲಿ. ನಾವೇನೂ ಜಾತಿ ಜನಗಣತಿ ವಿರೋಧಿಗಳೇನಲ್ಲ. ಆದ್ರೆ ಯಾರನ್ನೋ ಓಲೈಕೆ ಮಾಡಲು, ವೋಟಿಗಾಗಿ ಸಿದ್ದರಾಮಯ್ಯ ಇಷ್ಟು ಕೀಳು ಮಟ್ಟಕ್ಕೆ ಇಳೀತಾರೆ ಅಂದ್ರೆ ಅವರ ಮನಸ್ಥಿತಿ ಅರ್ಥ ಮಾಡ್ಕೋಬೇಕು. ಕಾಂಗ್ರೆಸ್​​ನಲ್ಲಿ ಬ್ರಿಟಿಷ್ ಡಿಎನ್ಎ ಬಂದಿದೆ, ಒಡಕು ಮಾಡುವ ಬುದ್ಧಿ ಎಂದು ಅವರು ಟೀಕಿಸಿದ್ದಾರೆ.

ಜಾತಿ ಸಮೀಕ್ಷೆಗೆ ನಮ್ಮ ವಿರೋಧ ಇಲ್ಲ. ಆದ್ರೆ ವೈಜ್ಞಾನಿಕವಾಗಿ ಮಾಡಲಿ, ಪ್ರತೀ ಮನೆಗೆ ಹೋಗಿ ಮನೆ ಮಾಲೀಕನ ಸಹಿ ಮಾಡಿಸಿಕೊಂಡು ಸಮೀಕ್ಷೆ ಮಾಡಲಿ. ಈಗಿನ ವರದಿಗೆ ಸಿದ್ದರಾಮಯ್ಯ ಅವರೇ ಡೈರೆಕ್ಟರ್, ಸ್ಕ್ರೀನ್ ಪ್ಲೇಯರ್, ಪ್ರೊಡ್ಯೂಸರ್. ಹನಿಟ್ರ್ಯಾಪ್, 500 ಕೋಟಿ ಕಿಕ್ ಬ್ಯಾಕ್, ಗುತ್ತಿಗೆದಾರರ ಆರೋಪ ವಿಚಾರ ಡೈವರ್ಟ್ ಮಾಡಲು ಈಗ ವರದಿ ಮುನ್ನೆಲೆಗೆ ತಂದಿದ್ದಾರೆ. ಅವರ ಎಲ್ಲ ಹುಳುಕು ಸೈಡ್ ಲೈನ್ ಮಾಡುವ ಉದ್ದೇಶವಿದೆ. ಸಿದ್ದರಾಮಯ್ಯ ತಂತ್ರಗಾರ ಅಲ್ಲ. ಕುತಂತ್ರ ಮಾಡಿಯೇ ಜೆಡಿಎಸ್ ಒಡೆದ್ರು, ಅದಕ್ಕೇ ಅವರನ್ನು ಹೊರಗೆ ಹಾಕಿದ್ರು. ಈಗ ಕಾಂಗ್ರೆಸ್​​ನಿಂದಲೂ ಯಾವಾಗ ಹೊರಗೆ ಹಾಕ್ತಾರೋ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲೇ ಈ ವರದಿಯಿಂದ ದೊಡ್ಡ ದಂಗೆ ಆಗಬಹುದು ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಮೂಗಿಗೆ ತುಪ್ಪ: ಒಕ್ಕಲಿಗರ ಮೀಸಲು ಹೆಚ್ಚಳಕ್ಕೆ ಶಿಫಾರಸು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಕ್ಕಲಿಗರ ಮೀಸಲು ಹೆಚ್ಚಳ ಸಾಧ್ಯವಿಲ್ಲ. ಈ ವರದಿ ಮೂಲಕ ಒಕ್ಕಲಿಗರ ಮೂಗಿಗೆ ತುಪ್ಪ ಸವರಲಾಗಿದೆ. ಈಗಾಗಲೇ 50% ಮೀಸಲಾತಿ ಮಿತಿ ಇರಬೇಕು ಅಂತ ಇದೆ. ಸರ್ಕಾರ ಸುಳ್ಳು ಹೇಳ್ತಿದೆ, ಹಾಗಾದ್ರೆ ಆದೇಶ ಹೊರಡಿಸಲಿ. ಹಾಗೆ ಸುಲಭವಾಗಿ ಮೀಸಲಾತಿ ಜಾಸ್ತಿ ಮಾಡುವ ಹಾಗಿದ್ದಿದ್ರೆ ನಾವು ಇದ್ದಾಗಲೇ ಕೊಡ್ತಿರ್ಲಿಲ್ವಾ?. ಮೀಸಲಾತಿ ಹೆಚ್ಚಳ ರಾಜ್ಯಕ್ಕೆ ಅಧಿಕಾರ ಇಲ್ಲ ಎಂದು ಆರ್ ಅಶೋಕ್ ಸ್ಪಷ್ಟಪಡಿಸಿದರು.

 

 

Share This Article
error: Content is protected !!
";