ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾಷೆ ಎಂಬ…….., ಭಾಷೆ ಎಂಬ ಭಾವ, ಭಾಷೆ ಎಂಬ ಸಂವಹನ ಮಾಧ್ಯಮ, ಭಾಷೆ ಎಂಬ ಸಂಸ್ಕೃತಿ, ಭಾಷೆ ಎಂಬ ಬದುಕು, ಭಾಷೆ ಎಂಬ ಅಭಿಮಾನ, ಭಾಷಾವಾರು ಪ್ರಾಂತ್ಯಗಳು, ಭಾಷೆ ಎಂಬ ಶ್ರೇಷ್ಠತೆಯ ವ್ಯಸನ, ಭಾಷೆ ಎಂಬ ಸಂಕುಚಿತತೆ, ಭಾಷೆ ಎಂಬ ಅನಾವಶ್ಯಕ ವಿವಾದಗಳು..
ಯಾವ ಭಾಷೆ ಎಷ್ಟು ಹಳೆಯದು ? ಯಾವ ಭಾಷೆಯಿಂದ ಇನ್ಯಾವ ಭಾಷೆ ಹುಟ್ಟಿದೆ ? ಯಾವ ಭಾಷೆಯಿಂದ ಮತ್ಯಾವ ಭಾಷೆ ಸತ್ತಿದೆ ? ಯಾವ ಭಾಷೆ ಶ್ರೇಷ್ಠ ? ಯಾವ ಭಾಷೆ ಕನಿಷ್ಠ ? ಹೀಗೆ ಭಾಷೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ.
ನಿನ್ನೆ ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ಹೇಳಿರುವುದು ಕೆಲವು ಕನ್ನಡಿಗರಿಗೆ ಬೇಸರವಾಗಿದೆ. ಕನ್ನಡ ಸ್ವತಂತ್ರ ಭಾಷೆ. ಅದಕ್ಕೆ ತಮಿಳಿಗಿಂತ ಹೆಚ್ಚಿನ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ .
ಹಾಗಾದರೆ ಸತ್ಯ ಏನಿರಬಹುದು ? ಈ ಜಗತ್ತಿನ ಮಾನವ ಸಮಾಜದ ಹುಟ್ಟನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ. ಈ ಬೃಹತ್ ಭೂಮಂಡಲದಲ್ಲಿ ಎಷ್ಟೋ ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳು, ಜಲಚರಗಳು, ಸಸ್ಯ ರಾಶಿಗಳ ಜೊತೆ ಮನುಷ್ಯನು ಸಹ ಎಲ್ಲೋ ಹುಟ್ಟಿದ್ದಾನೆ, ಹೇಗೋ ಬೆಳೆದಿದ್ದಾನೆ. ಆ ಪ್ರಕ್ರಿಯೆಯಲ್ಲಿ ಏನೋ ಒಂದು ಧ್ವನಿ ಹೊರಡಿಸಿದ್ದಾನೆ. ಅದು ಇನ್ನೇನೋ ಆಗಿ ಒಂದು ಸಂವಹನ ಮಾಧ್ಯಮವಾಗಿ ಬೆಳವಣಿಗೆ ಹೊಂದಿದೆ.
ಆ ಅನಿವಾರ್ಯ ಮಾಧ್ಯಮ ಒಂದು ನಿರ್ದಿಷ್ಟ ರೂಪ ಪಡೆದು ಒಂದು ಭಾಷೆಯಾಗಿದೆ. ಆ ಭಾಷೆ ಲಿಪಿಯಾಗಿ ಅಭಿವೃದ್ಧಿ ಹೊಂದಿ ಹೇಗೋ ಏನೋ ಒಂದು ರೂಪ ಪಡೆದು ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ, ಲ್ಯಾಟಿನ್, ಸ್ಪ್ಯಾನಿಶ್, ಪ್ರಾಕೃತ, ಪಾಲಿ, ಇಂಗ್ಲಿಷ್ ಹೀಗೆ ನಾನಾ ರೂಪಗಳನ್ನು ಪಡೆದಿದೆ. ಹಾಗೆಯೇ ಎಷ್ಟೋ ಸಂವಹನ ಕಲೆ ಭಾಷಾ ರೂಪವಾಗಿ ಬೆಳೆದರೂ ಕಾಲಾಂತರದಲ್ಲಿ ಸರ್ವನಾಶವನ್ನು ಹೊಂದಿದೆ.
ಆಗಿನ ಅತ್ಯಂತ ವಿರಳ ಜನಸಂಖ್ಯೆ, ಕನಿಷ್ಠ ವ್ಯಾವಹಾರಿಕತೆ, ಪ್ರಾದೇಶಿಕತೆ ಎಲ್ಲವನ್ನು ನೋಡಿದರೆ ಯಾವ ಭಾಷೆ ಯಾವಾಗ ಹುಟ್ಟಿದೆಯೋ, ಅದನ್ನು ಇನ್ಯಾರೋ ಕಲಿತುಕೊಂಡು ಹೇಗೆ ಉಪಯೋಗಿಸಿದರೋ, ಅದನ್ನು ಮತ್ಯಾರು ಮುಂದುವರಿಸಿದರೋ, ಅದು ಮತ್ತೊಂದು ರೂಪವಾಗಿ ಇನ್ಯಾವ ಭಾಷೆಯಾಗಿತ್ತೋ, ಖಂಡಿತವಾಗಲೂ ತುಂಬಾ ನಿರ್ದಿಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಸಂಶೋಧಕರು ಇರುವ ದಾಖಲೆಗಳ ಆಧಾರದಲ್ಲಿ ಒಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನಮಗೆ ಸಿಕ್ಕಿರುವ ಅಧಿಕೃತ ಮಾಹಿತಿಗಳ ಪ್ರಕಾರ ಒಂದಷ್ಟು ಇತಿಹಾಸದ ಕಾಲಘಟ್ಟ, ಸಾಧ್ಯತೆಗಳನ್ನು ಮಾತ್ರ ಆಧರಿಸಿ ಒಂದು ಅಭಿಪ್ರಾಯ ರೂಪಿಸಿಕೊಳ್ಳಬೇಕೆ ಹೊರತು ಈ ಭಾಷೆಯೇ ಪ್ರಥಮ, ಈ ಭಾಷೆಯೇ ಪುರಾತನವಾದದ್ದು, ಇದರಿಂದಾಗಿಯೇ ಇನ್ನೊಂದಷ್ಟು ಭಾಷೆಗಳು ಹುಟ್ಟಿದೆ, ಈ ಭಾಷೆಯಿಂದ ಮತ್ತಷ್ಟು ಭಾಷೆ ಸತ್ತಿದೆ ಹೀಗೆ ಹೇಳುವುದೇ ಅವೈಜ್ಞಾನಿಕ.
ದೀರ್ಘವಾಗಿ ಯೋಚಿಸಿ ನೋಡಿ. ಜೀವಂತವಾಗಿ ಬದುಕುವುದೇ ಒಂದು ಸಾಧನೆಯಾಗಿದ್ದ ಆ ಕಾಲಘಟ್ಟದಲ್ಲಿ ಪ್ರಾಣಿ ಪಕ್ಷಿ, ಕಾಡು ಮೇಡು, ಪರಿಸರ ವಿಕೋಪಗಳು, ಆಹಾರದ ಸಮಸ್ಯೆ, ರೋಗ ರುಜಿನಗಳು ಹೀಗೆ ಮನುಷ್ಯ ಜೀವಿಸುವುದೇ ಒಂದು ದೊಡ್ಡ ಸಾಧನೆ ಆಗಿದ್ದಾಗ ಯಾವ ಭಾಷೆ ಹೇಗೆ ಹುಟ್ಟಿತೋ, ಯಾವ ಭಾಷೆ ಯಾವ ಯಾವ ರೂಪ ಪಡೆಯಿತೋ ಯಾರಿಗೆ ಗೊತ್ತು.
ದಾಖಲೆಗಳು ಕೇವಲ ಸದ್ಯದ ವಾಸ್ತವವನ್ನು ಬಿಚ್ಚಿಡುತ್ತವೆಯೇ ಹೊರತು ಅದೇ ಅಂತಿಮ ಸತ್ಯವಾಗುವುದಿಲ್ಲ ಮತ್ತು ಅದು ಎಂದೆಂದಿಗೂ ಮುಗಿಯದ ಚರ್ಚೆಯಾಗುತ್ತದೆ. ಏಕೆಂದರೆ ಮನುಷ್ಯ ಹುಟ್ಟಿ, ಭಾಷೆ ಹುಟ್ಟಿ, ಎಷ್ಟೋ ಶತಮಾನಗಳ ನಂತರ ಆ ಬಗ್ಗೆ ಅಧ್ಯಯನಗಳು ನಡೆದಿರುವುದರಿಂದ ಖಚಿತವಾಗಿ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ.
ಇತಿಹಾಸದ ವಿದ್ಯಾರ್ಥಿಯಾಗಿ ಖಂಡಿತವಾಗಲೂ ಯಾವುದೋ ಒಂದು ಭಾಷೆ ಅತ್ಯಂತ ಪ್ರಾಚೀನವಾದದ್ದು ಎನ್ನುವ ಮಾನ್ಯತೆ ನೀಡಲು ಮನಸ್ಸು ಒಪ್ಪುವುದಿಲ್ಲ. ಅದು ಅಧಿಕೃತವೂ ಆಗಿರುವುದಿಲ್ಲ. ಇರಬಹುದೇನೋ ಅಷ್ಟೇ.
ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ಮನಸ್ಸಿನಲ್ಲಿ ಮೂಡಿದ ಭಾವನೆ, ಗಂಟಲಿನಲ್ಲಿ ಹಾದು, ನಾಲಿಗೆಯ ಕದಲುವಿಕೆ ಅಥವಾ ಚಲನೆಯಿಂದ ತುಟಿಗಳ ಮುಖಾಂತರ ಹೊರ ಬರುವ ಧ್ವನಿ ತರಂಗ ಮತ್ತು ಅದು ಬರಹದ ರೂಪದಲ್ಲಿ ಗೆರೆಗಳ ಮೂಲಕ ಮೂಡುವ ಕಣ್ಣಿಗೆ ಕಾಣುವ ಅಕ್ಷರಗಳು. ಇದು ಸರಳ ನಿರೂಪಣೆ. ಆಳದಲ್ಲಿ ಮತ್ತಷ್ಟು ಅರ್ಥ ಹೊಂದಿದೆ.
ವಿಶ್ವದಲ್ಲಿ ಲಕ್ಷಾಂತರ ಭಾಷೆಗಳಿವೆ. ಭಾಷೆಯಲ್ಲಿ ಶ್ರೇಷ್ಠತೆಯಿಲ್ಲ. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ವ್ಯತ್ಯಾಸ ಇರಬಹುದು. ಉಚ್ಚಾರಣೆಯಲ್ಲಿ ಬೇರೆ ರೀತಿಯಲ್ಲಿ ಇರಬಹುದಷ್ಟೇ. ಜೊತೆಗೆ ಯಾವ ಭಾಷೆಯೂ ಸಂಪೂರ್ಣ ಸ್ವತಂತ್ರವಲ್ಲ. ಎಲ್ಲಾ ಭಾಷೆಗಳೂ ಇತರ ಭಾಷೆಗಳನ್ನು ಅವಲಂಬಿಸಿಯೇ ಇರುತ್ತವೆ.
ಆದ್ದರಿಂದ ಕಮಲ್ ಹಾಸನ್ ಆಗಲಿ, ಇನ್ಯಾರೇ ಆಗಲಿ, ಸುಮ್ಮನೆ ಈ ಕ್ಷಣದ ಸಮಾಧಾನಕ್ಕಾಗಿ, ಸ್ವಾರ್ಥಕ್ಕಾಗಿ, ಲಾಭಕ್ಕಾಗಿ, ಒಂದಷ್ಟು ಹೇಳಿಕೆಗಳನ್ನು ನೀಡಬಹುದಷ್ಟೇ ……
ಲೇಖನ-ವಿವೇಕಾನಂದ. ಎಚ್. ಕೆ. 9844013068……