ಆಧಾರ್, ಪಾನ್ ಕಾರ್ಡ್ ಲಿಂಕ್ ಮಾಡಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ-ಬಿಟಿಜೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರ ಮರು ಸಮೀಕ್ಷೆ ಮಾಡುತ್ತಿದ್ದು ಆಧಾರ್, ಪಾನ್ ಕಾರ್ಡ್ ಲಿಂಕ್ ಮಾಡಿ ಎಲ್ಲೂ ಲೋಪ ಆಗದಂತೆ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ಮಾಡಬೇಕು ಎಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್ ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧಾರ್ ಹಾಗೂ ಪಾನ್‌ಕಾರ್ಡ್ ಲಿಂಕ್ ಮಾಡಿ ಸಮೀಕ್ಷೆ ನಡೆಸಲಿ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಆಯಾ ಜಾತಿಗನುಗುಣವಾಗಿ ಮೀಸಲಾತಿ ನೀಡಲು ಮರು ಸಮೀಕ್ಷೆ ನೆರವಾಗಲಿದೆ. ಆಧಾರ್, ಪಾನ್ ಕಾರ್ಡ್ ಲಿಂಕ್ ಮಾಡಿ ಸಮೀಕ್ಷೆ ಮಾಡುವುದರಿಂದ ಶೋಷಿತ ಸಮುದಾಯಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಜಗದೀಶ್ ಹೇಳಿದರು.

- Advertisement - 

ಹತ್ತು ವರ್ಷಗಳ ನಂತರ ಜಾತಿ ಗಣತಿ ಮರು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಜು.೨೬ ರಂದು ಶನಿವಾರ ಬೆಳಿಗ್ಗೆ ೧೦-೩೦ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ. ಶೋಷಿತ ಸಮುದಾಯಗಳ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎರಡು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂತರಾಜ್ ಆಯೋಗದ ವರದಿ ಸ್ವೀಕರಿಸುವುದಾಗಿ ಭರವಸೆ ಕೊಟ್ಟಿದ್ದರು.

ತೆಲಂಗಾಣ ಮಾದರಿಯಲ್ಲಿ ಈಗ ಮರು ಸಮೀಕ್ಷೆ ನಡೆಸಲು ಸದನಲ್ಲಿ ತೀರ್ಮಾನಿಸಿರುವುದರಿಂದ ಎಲ್ಲಾ ಜಾತಿಯಲ್ಲಿನ ಬಡವರಿಗೆ ಅನುಕೂಲವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನಜಾಗೃತಿ ಸಭೆ ನಡೆಸಲಾಗುವುದು. ಶೋಷಿತ ಸಮುದಾಯಗಳು ಗಣತಿ ಸಮಯದಲ್ಲಿ ಪೂರ್ಣ ಮಾಹಿತಿ ನೀಡುವಂತೆ ಬಿ.ಟಿ.ಜಗದೀಶ್ ವಿನಂತಿಸಿದರು.

- Advertisement - 

ಶೋಷಿತ ಸಮುದಾಯಗಳ ಮುಖಂಡರುಗಳಾದ ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಅನಂತನಾಭ, ಮೆಹಬೂಬ್‌ಪಾಷ, ಎಣ್ಣೆಗೆರೆ ವೆಂಕಟರಾಮಯ್ಯ, ಸುಬ್ಬರಾಜ್, ಆದರ್ಶ ಯಲ್ಲಪ್ಪ, ನಂಜಪ್ಪ ಇವರುಗಳು ಜನಜಾಗೃತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ ಕಾಂತರಾಜ್ ವರದಿಯನ್ನು ರಾಜ್ಯ ಸರ್ಕಾರ ಬೇಗ ಸ್ವೀಕರಿಸಲಿ. ಗಣತಿಗೆ ಮನೆ ಮನೆಗೆ ಬಂದಾಗ ಮಾಹಿತಿ ನೀಡಿ ಮರು ಸಮೀಕ್ಷೆ ಯಶಸ್ವಿಯಾಗಲು ಸಹಕರಿಸುವಂತೆ ಶೋಷಿತ ಸಮುದಾಯಗಳಲ್ಲಿ ಕೋರಿದರು.

ದಲಿತ ಮುಖಂಡ ಡಿ.ದುರುಗೇಶಪ್ಪ ಮಾತನಾಡಿ ಕಾಂತರಾಜ್ ವರದಿ ವೈಜ್ಞಾನಿಕವಾಗಿದೆ. ಇದರಿಂದ ಶೋಷಿತ ಸಮುದಾಯಗಳಿಗೆ ನೆರವಾಗಲಿದೆ. ಕೆಲವು ಮೇಲ್ಜಾತಿಯವರು ವರದಿಯನ್ನು ತಡೆಯುವ ಹುನ್ನಾರ ನಡೆಸುತ್ತಿರುವುದು ಸರಿಯಲ್ಲವೆಂದು ಹೇಳಿದರು.

ಸೈಯದ್ ವಲಿಖಾದ್ರಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಹೊಸದಾಗಿ ಜಾತಿ ಗಣತಿ ಸಮೀಕ್ಷೆ ನಡೆಸಲು ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಇದರಿಂದ ಶೋಷಿತ ಸಮುದಾಯಗಳು ಹಾಗೂ ಅಲ್ಪಸಂಖ್ಯಾತರಿಗೆ ಸಹಾಯವಾಗಲಿದೆ ಎಂದರು.

ಅಲೆಮಾರಿ ಜನಾಂಗಗಳ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಕೊರಚ-ಕೊರಮ ಸಮಾಜದ ಕೃಷ್ಣಪ್ಪ, ಎ.ಸಾಧಿಕ್‌ವುಲ್ಲಾ, ಬಸವರಾಜ್ ಬಚ್ಚಬೋರನಹಟ್ಟಿ, ಹನುಮಂತಪ್ಪ ಗೋಡೆಮನೆ, ಎ.ಜಾಕಿರ್‌ಹುಸೇನ್, ಡಿ.ಉಮೇಶ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
error: Content is protected !!
";