ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕನ್ನಡ ನಾಡಿನ ಭಾಷೆ, ಜಲ, ಪರಿಸರ ಸಂರಕ್ಷಣೆಗೆ ಹೋರಾಡಲು ರಾಜ್ಯದ ಎಲ್ಲಾ ಕನ್ನಡಿಗರು ಸಜ್ಜುಗೊಳ್ಳಬೇಕು ಎಂದು ಹಿರಿಯ ಸಾಹಿತಿ ಹಾಗೂ ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ.ಜಿ.ಪರಮೇಶ್ವರಪ್ಪ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾ ಸಂಘ, ಕೆ.ಎಂ.ಕೊಟ್ಟಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದ್ದು, ವಿಶ್ವದಲ್ಲಿ ೨೭ನೇ ಸ್ಥಾನಮಾನವನ್ನು ದೇಶದಲ್ಲಿ ೭ನೇ ಸ್ಥಾನಮಾನವನ್ನು ಹೊಂದಿದೆ. ಕನ್ನಡಕ್ಕೆ ೮ ಜ್ಞಾನ ಪೀಠ ಪ್ರಶಸ್ತಿ ಲಭಿಸಿದ್ದು, ಸರಳವಾದ ಮುತ್ತಿನ ಮಣಿಯಂತಿರುವ ವಿಶ್ವದ ಏಕೈಕ ಭಾಷೆ ಕನ್ನಡವಾಗಿದೆ. ಆದಿಕವಿ ಪಂಪನಿಂದ ಹಿಡಿದು ಆಧುನಿಕ ಕವಿ ಚಂಪಾ ವರೆಗೂ ನೂರಾರು ಕವಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ವಿವಿಧ ಭಾಷೆಯ ಜನರು ವಿವಿಧ ರೀತಿಯ ಜನಾಂಗ ಇದ್ದರೂ ಇಲ್ಲಿ ಸಮಗ್ರತೆ, ಐಕ್ಯತೆ, ಹಾಗೂ ಕೋಮುಸೌಹಾರ್ದತೆ ಯಿಂದ ಬಾಳುವ ಮೂಲಕ ಕರ್ನಾಟಕ ಮಾದರಿ ರಾಜ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ದೊಡ್ಡಮಲ್ಲಯ್ಯ ಮಾತನಾಡಿ, ಜಿಲ್ಲೆಯ ಜಾನಪದ ಕಲೆಗಳು ನಾಡಿಗೆ ಪ್ರಸಿದ್ಧಿಯಾಗಿವೆ. ನಾಡೋಜ, ಸಿರಿಯಜ್ಜಿ, ಬಿದರಕೆರೆಯ ತೋಪಜ್ಜಿಯ ಕೊಡುಗೆ ಬಹುದೊಡ್ಡದಾಗಿದೆ. ಸೋಬಾನೆ, ಭಜನೆ, ಬೀಸುವ ಕಲ್ಲಿನ ಪದ, ಗೊರವನ ಕುಣಿತ, ತಮಟೆ ವಾದ್ಯ, ವೀರಗಾಸೆ, ಪೂಜಾ ಕುಣಿತ, ಜಾನಪದ ಕಲೆಗಳು ನಾಡಿಗೆ ಹಿರಿಮೆ ತಂದಿವೆ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿ ಮಾತನಾಡಿ, ಸಾಹಿತ್ಯ, ಸಂಗೀತ, ಕಲೆ, ಜಾನಪದ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ದುಡಿದ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ಸಾಹಿತಿಗಳಿಗೆ, ಸಂಗೀತಗಾರರಿಗೆ, ಹಾಗೂ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು, ಬೇರೆ ಜಿಲ್ಲೆಯವರಿಗೆ ಪ್ರಶಸ್ತಿ ನೀಡದೆ ಸ್ಥಳೀಯರಿಗೆ ಪ್ರಾತಿನಿಧ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಬಿ.ಟಿ.ಶ್ರೀಧರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜೆ.ನಿಜಲಿಂಗಪ್ಪ, ಹಿರಿಯ ಕಲಾವಿದರಾದ ರವಿಯಣ್ಣ, ಮಂಜಣ್ಣ, ಚೇತನ್, ಭಾಗ್ಯಜ್ಯೋತಿ, ಅರುಣಾಕ್ಷಿ, ತಿಮ್ಮಣ್ಣ, ಶಿಕ್ಷಕರಾದ ಕೆ.ಮಂಜುನಾಥ್, ರುದ್ರಮ್ಮ.ಬಿ., ಅಭಿಲಾಷ, ತಬಲ ವಾದಕರಾದ ಎಸ್.ಶಿವಲಿಂಗಪ್ಪ, ಅಭಿ ಹಾಗೂ ಇತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಆರ್.ತಿಪ್ಪೇಸ್ವಾಮಿ ಮತ್ತು ತಂಡದಿಂದ ಕುವೆಂಪುರವರ ನಾಡಗೀತೆಯನ್ನು ಪ್ರಸ್ತುತಪಡಿಸಲಾಯಿತು.