ಚಂದ್ರವಳ್ಳಿ ನ್ಯೂಸ್, ಶೃಂಗೇರಿ:
ಕಾಡಾನೆ ದಾಳಿಗೆ ಇಬ್ಬರು ಬಿಜೆಪಿ ಮುಖಂಡರು ಬಲಿಯಾಗಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ಕೆರೆಕಟ್ಟೆ ಸಮೀಪದ ಕೆರೆಮನೆ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದ್ದು ಆಕ್ರೋಶಗೊಂಡ ಗ್ರಾಮಸ್ಥರು ತಹಶೀಲ್ದಾರ್ ಅವರ ಜೀಪು ತಡೆದು ಪ್ರತಿಭಟಿಸಿರುವ ಘಟನೆ ಜರುಗಿದೆ.
ಕಾಡಾನೆ ದಾಳಿಯಲ್ಲಿ ಹರೀಶ್ ಹಾಗೂ ಉಮೇಶ್ ಪ್ರಾಣ ಕಳೆದುಕೊಂಡವರು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ತೆರಳುತ್ತಿದ್ದ ತಹಶೀಲ್ದಾರ್ ಅವರಿದ್ದ ಜೀಪನ್ನು ಸ್ಥಳೀಯರು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಸಂದರ್ಭದಲ್ಲಿ ಮೊದಲು ವ್ಯಕ್ತಿಯೊಬ್ಬನ ಮೇಲೆ ಕಾಡಾನೆ ದಾಳಿ ಮಾಡಿದೆ. ಮನೆಯಿಂದ ಸ್ವಲ್ಪ ದೂರದಲ್ಲಿ ನಾಯಿ ಏಕೆ ಬೊಗಳುತ್ತಿದೆ ಎಂದು ನೋಡಲು ಹೋಗಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದೆ.
ಘಟನಾ ಸ್ಥಳಕ್ಕೆ ಶೃಂಗೇರಿ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ಕಳ ಅರಣ್ಯ ವ್ಯಾಪ್ತಿಗೆ ಸೇರುವ ಪ್ರದೇಶವಾಗಿದ್ದು ಘಟನಾ ಸ್ಥಳಕ್ಕೆ ತೆರಳುತ್ತಿದ್ದ ತಹಶೀಲ್ದಾರ್ ಜೀಪನ್ನು ಅಡ್ಡಗಟ್ಟಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದೆಡೆ ಸ್ಥಳಕ್ಕೆಭೇಟಿ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಎಸ್ಪಿ ವಿಕ್ರಂ ಅಮಟೆ ಅವರನ್ನೂ ಸ್ಥಳೀಯರು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ.
ಕಾಡಾನೆ ಹಾವಳಿಗೆ ಆಕ್ರೋಶಗೊಂಡ ಸ್ಥಳೀಯ ನೂರಾರು ಜನ ಸೇರಿ ಪ್ರತಿಭಟನೆ ಮಾಡಿದ್ದಾರೆ. ಪದೇ ಪದೇ ಈ ರೀತಿಯ ಘಟನೆಗಳು ಈ ಭಾಗದಲ್ಲಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಹಲವು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕೂಡಲೇ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

